ಕೋವಿಡ್ ಲಾಕ್‌ಡೌನ್ ವೇಳೆ ಅಧಿಕಾರಿಗಳು ಜನರೊಂದಿಗೆ ಹೇಗೆ ವರ್ತಿಸಬೇಕು ಎಂಬ ನಿಟ್ಟಿನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್ ಸಲ್ಡಾನಾ ಅವರು ರಾಜ್ಯದ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿ ಅವರಿಗೆ ಪತ್ರ ಬರೆದಿದ್ದಾರೆ. ದಿನಸಿಯಂತಹ ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರಬರುವ ಜನರ ಜೊತೆ ಪೊಲೀಸರು, ಅಧಿಕಾರಿಗಳು ದಯೆಯಿಂದ ವರ್ತಿಸುವ ವಿಚಾರದಲ್ಲಿ ಎ ಜಿ ಅವರು ಮಧ್ಯಪ್ರವೇಶಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಬೆಳಿಗ್ಗೆ 6.00 ರಿಂದ 10.00ರವರೆಗಿನ ನಿಗದಿತ ಸಮಯದೊಳಗೆ ಅಗತ್ಯವಸ್ತುಗಳನ್ನು ಖರೀದಿಸುವ ಹಕ್ಕು ಎಲ್ಲಾ ನಾಗರಿಕರಿಗೆ ಇದೆ. ಜನ ಅದಕ್ಕೆ ಅನುಗುಣವಾಗಿ ವರ್ತಿಸುತ್ತಿದ್ದಾಗ ಪೊಲೀಸರು ಹಿಂಸೆಗೆ ಮುಂದಾಗುವುದನ್ನು ತಡೆಯಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನ ದಿನಸಿ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಬಳಸಬಾರದು ಎಂಬ ಸರ್ಕಾರದ ನಿರ್ಧಾರಕ್ಕೆ ಕೂಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಾಗರಿಕರು ಪ್ರತಿದಿನ ಶಾಪಿಂಗ್ ಮಾಡಲು ಸಾಧ್ಯವಿಲ್ಲ. ದ್ವಿದಳ ಧಾನ್ಯಗಳಿಂದ ಹಿಡಿದು ತರಕಾರಿ ಮತ್ತಿತರ ಗೃಹೋಪಯೋಗಿ ವಸ್ತುಗಳು ಗಾತ್ರದಲ್ಲಿ ದೊಡ್ಡದಾಗಿಯೂ, ಭಾರವಾಗಿಯೂ ಇರುತ್ತವೆ. ಈ ವಸ್ತುಗಳನ್ನು ದೈಹಿಕವಾಗಿ ಹೊತ್ತು ಸಾಗಿಸುವುದು ಅಸಾಧ್ಯ. ಎಲ್ಲಾ ಬಗೆಯ ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಅಂತಹ ಸಂದರ್ಭದಲ್ಲಿ ಜನ ತಮ್ಮ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಬಳಸುವುದು ಅವಶ್ಯಕ. ಆದರೆ ವಾಹನ ಬಳಸಿದರೆ ಪೊಲೀಸರು ತಕ್ಷಣವೇ ಅವುಗಳನ್ನು ವಶಪಡಿಸಿಕೊಳ್ಳುತ್ತಾರೆ” ಎಂದು ಅವರು ಬೇಸರ ವ್ಯಕ್ಡಪಡಿಸಿದ್ದಾರೆ.
ಲಾಕ್ ಡೌನ್ ವೇಳೆ ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು. ವಶಪಡಿಸಿಕೊಳ್ಳಲಾದ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದಾಗಿ ಸರ್ಕಾರಕ್ಕೆ ಎ ಜಿ ನಾವದಗಿ ಅವರು ಸಲಹೆ ನೀಡಬೇಕು.
ತೀವ್ರ ಒತ್ತಡ ಮತ್ತು ಅಪಾಯದಲ್ಲಿರುವ ರಾಜ್ಯದ ಜನತೆ ಯಾವುದೇ ಭೀತಿ ಹಾಗೂ ಹಿಂಸಾಚಾರಕ್ಕೆ ತುತ್ತಾಗದೆ ದೈನಂದಿನ ಶಾಪಿಂಗ್ ಮಾಡಬೇಕು. ಈ ಉದ್ದೇಶಕ್ಕಾಗಿ ವಾಹನ ಬಳಕೆಗೆ ಅನುಮತಿ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿದ್ದು ಅವರು ದಾರ್ಷ್ಟ್ಯದಿಂದ ವರ್ತಿಸದಂತೆ ಸಲಹೆ ನೀಡಬೇಕು.
ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಕೆಲ ದಿನಗಳ ಹಿಂದೆ ನಾಗರಿಕರ ವಾಹನ ಬಳಕೆ ವಿಚಾರವಾಗಿ ಒರಟಾಗಿ ವರ್ತಿಸಿದ್ದಾರೆ. ಕರ್ನಾಟಕ ಹೊರತುಪಡಿಸಿ ಬೇರೆಲ್ಲೂ ಈ ರೀತಿಯ ಘಟನೆಗಳು ನಡೆದಿಲ್ಲ.
ಲಾಕ್ ಡೌನ್ ಅಥವಾ ಸೆಕ್ಷನ್ 144 ವಿಧಿಸುವಾಗ ಅದಕ್ಕೆ ಕಾನೂನಿನ ಸಮರ್ಥನೆ ಇರಬೇಕಿದ್ದು ಕರ್ನಾಟಕದಲ್ಲಿ ಇದು ಕಂಡುಬರುತ್ತಿಲ್ಲ. ಎರಡನೆಯದಾಗಿ ಅಂತಹ ಆದೇಶಗಳು ಸ್ಪಷ್ಟ, ಸಮಂಜಸ ಹಾಗೂ ಕಾರ್ಯಗತಗೊಳಿಸುವಂತಿರಬೇಕು.
ಇತ್ತೀಚಿನ ದಿನಗಳಲ್ಲಿ ದೇಶದ್ರೋಹದಂತಹ ಆರೋಪಗಳನ್ನು ಹೊರಿಸುವುದು ಹೆಚ್ಚುತ್ತಿದೆ. ಅಧೀನ ನ್ಯಾಯಾಲಯಗಳು ಅಂತಹ ಅಪರಾಧಗಳಿಗೆ ಜಾಮೀನು ನೀಡುವುದಿಲ್ಲ. ಪರಿಣಾಮ ನಾಗರಿಕರು ವರ್ಷಗಟ್ಟಲೆ ಬಂಧನದಲ್ಲಿರಬೇಕಾಗುತ್ತದೆ.
ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಮೋಟಾರು ವಾಹನ ಕಾಯಿದೆಯ ನಿಬಂಧನೆಗಳನ್ನು ತೆರವುಗೊಳಿಸಲು ಅವಕಾಶವಿದೆ.
ನ್ಯಾಯಾಲಯಗಳಿಗೆ ಒಯ್ಯುವ ಮೊದಲೇ ಇಂತಹ ವಿಚಾರಗಳನ್ನು ಇತ್ಯರ್ಥಪಡಿಸಲು ಎಜಿ ಅವರ ಮಧ್ಯಪ್ರವೇಶ ಅಗತ್ಯವಿದೆ.
ಬಾಂಬೆ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ನ್ಯಾ. ಸಲ್ಡಾನಾ ನಂತರ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಯಾದರು. ಅವರು ಸೇವೆಯಿಂದ ನಿವೃತ್ತರಾದದ್ದು 2004 ರಲ್ಲಿ.