ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ₹19ರಿಂದ 20 ಸಾವಿರ ಅಲ್ಪ ಪಿಂಚಣಿ ನೀಡುವುದು ಸರಿಯಲ್ಲ: ಸುಪ್ರೀಂ ಕೋರ್ಟ್

ನ್ಯಾಯಾಧೀಶರ ಪಿಂಚಣಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ನೆರವು ಕೇಳಿದೆ.
ಸುಪ್ರೀಂ ಕೋರ್ಟ್, ನ್ಯಾಯಾಧೀಶರ ಪಿಂಚಣಿ
ಸುಪ್ರೀಂ ಕೋರ್ಟ್, ನ್ಯಾಯಾಧೀಶರ ಪಿಂಚಣಿ

ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಸಾಕಷ್ಟು ಪಿಂಚಣಿ ನೀಡಲಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಬೇಸರ ವ್ಯಕ್ತಪಡಿಸಿದೆ.

ನ್ಯಾಯಾಧೀಶರ ಪಿಂಚಣಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯಕ್ಕೆ ನೆರವಾಗಲು ಸೂಚಿಸಿತು.

"ಇದು ಬಹಳ ಗಂಭೀರವಾದ ವಿಷಯ, ಅಟಾರ್ನಿ ಜನರಲ್ ಅವರೇ. ಇಷ್ಟು ದೀರ್ಘ ಸೇವೆಯ ನಂತರ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ 19,000 ರಿಂದ 20,000 ವೇತನ ನೀಡುವುದು ಸರಿಯಲ್ಲ. ಆಗ ಅವರು ಖಾಸಗಿ ಪ್ರಾಕ್ಟೀಸ್‌ಗೆ ಮುಂದಾಗಲು ಸಾಧ್ಯವೇ? ನೀವೇ ಊಹಿಸಿ. ಅವರು ನಿಜವಾಗಿಯೂ ಅಸಹಾಯಕವಾಗಿಬಿಡುತ್ತಾರೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಕೆಲ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತಿಲ್ಲ. ಈ ಬಗ್ಗೆಯೂ ಗಮನಹರಿಸಿ ಎಂದು ಸಿಜೆಐ ಹೇಳಿದರು.

ಆಗ ಎಜಿ ಅವರು "ಪರಿಶೀಲಿಸುವೆ. ಆದರೆ ಪಿಂಚಣಿ ಸಿಗದೆ ಇರುವುದು ಕೆಲವೇ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಇರಬೇಕು. ಎಲ್ಲರಿಗೂ ಅಲ್ಲ" ಎಂದು ಎಜಿ ಉತ್ತರಿಸಿದರು.

ಇದೇ ಪ್ರಕರಣದ ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ತಮ್ಮ ಕೆಲಸದ ಜೀವನದ ಗಮನಾರ್ಹ ಭಾಗವನ್ನು ನ್ಯಾಯಾಂಗ ಸಂಸ್ಥೆಯ ಸೇವೆಯಲ್ಲಿ ಕಳೆಯುವುದರಿಂದ ನಿವೃತ್ತಿಯ ನಂತರ ಘನತೆಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಮಹತ್ವವನ್ನು ನ್ಯಾಯಪೀಠ ಒತ್ತಿಹೇಳಿತ್ತು.

"ನ್ಯಾಯಾಂಗ ಅಧಿಕಾರಿಗಳು ತಮ್ಮ ಜೀವನದ ಬಹುಭಾಗವನ್ನು ನ್ಯಾಯಾಂಗ ಸಂಸ್ಥೆಯ ಸೇವೆಯಲ್ಲಿ ಕಳೆದರೂ ವಕೀಲ ಸಮುದಾಯದ ಉಳಿದ ಸದಸ್ಯರಿಗೆ ಲಭ್ಯವಿರುವ ಪ್ರಯೋಜನಗಳನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ನಿವೃತ್ತಿಯ ನಂತರ ನ್ಯಾಯಾಂಗ ಅಧಿಕಾರಿಗಳು ಘನತೆಯಿಂದ ಬದುಕುವಂತೆ ಪ್ರಭುತ್ವ ನೋಡಿಕೊಳ್ಳಬೇಕು" ಎಂದು ಸಿಜೆಐ ಹೇಳಿದರು.

ಜುಲೈ 1ರಿಂದ ಜಿಲ್ಲಾ ನ್ಯಾಯಾಧೀಶರಿಗೆ ಪರಿಷ್ಕೃತ ದರದಲ್ಲಿ ಪಿಂಚಣಿ ಪಾವತಿಸುವ ತನ್ನ ಹಿಂದಿನ ನಿರ್ದೇಶನಗಳನ್ನು ಪಾಲಿಸದ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯವು ನವೆಂಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.

Related Stories

No stories found.
Kannada Bar & Bench
kannada.barandbench.com