“ರಕ್ತಕ್ಕಿಂತ ರೊಟ್ಟಿಯೇ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ 35 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನೌಕರನಿಗೆ ಪಿಂಚಣಿ ನೀಡದೆ ರಾಜ್ಯ ಸರ್ಕಾರ ಸತಾಯಿಸುತ್ತಿದೆ. ಇದರಿಂದ ಜೀವನದ ಸಂಧ್ಯಾಕಾಲದಲ್ಲಿರುವ ನಿವೃತ್ತ ಸರ್ಕಾರಿ ನೌಕರ ತನ್ನ ಆತ್ಮ ಹಾಗೂ ದೇಹ ಒಟ್ಟಿಗೆ ಹಿಡಿದುಕೊಂಡು ಪಿಂಚಣಿಗಾಗಿ ಕಾಯುತ್ತಿದ್ದಾರೆ” ಎಂದು ಪ್ರಕರಣವೊಂದರ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ತೀವ್ರ ಅಸಮಾಧಾನ ಹೊರಹಾಕಿದೆ.
ಕರ್ನಾಟಕ ನೀರಾವರಿ ನಿಗಮದ ಕಾರ್ಯಕಾರಿ ಎಂಜಿನಿಯರ್ ಕಚೇರಿಯ ನಿವೃತ್ತ ನೌಕರ, 63 ವರ್ಷದ ಎಸ್ ಎಸ್ ಜಾಧವ್ ಅವರಿಗೆ ಸಂಭಾವ್ಯ ಪಿಂಚಣಿ ಸೇರಿದಂತೆ ಸೇವಾ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಸ್‌ಎಟಿ) ಈಚೆಗೆ ಆದೇಶಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಪಿ ಕೃಷ್ಣ ಭಟ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದ್ದು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಎಂಟು ವಾರಗಳಲ್ಲಿ ಜಾಧವ್ ಅವರಿಗೆ ಸಂಭಾವ್ಯ ಪಿಂಚಣಿ ಹಣ ಬಿಡುಗಡೆಗೊಳಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಶೇ.2ರಷ್ಟು ಬಡ್ಡಿ ಪಾವತಿಸಬೇಕು. ಆ ಮೊತ್ತವನ್ನು ತಪ್ಪೆಸಗಿದ ಅಧಿಕಾರಿಯಿಂದ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
ಪ್ರಕರಣದ ಹಿನ್ನೆಲೆ: ಜಾಧವ್ ಅವರು 1983ರಲ್ಲಿ ಕರ್ನಾಟಕ ನೀರಾವರಿ ನಿಗಮದ ಕಾರ್ಯಕಾರಿ ಎಂಜಿನಿಯರ್ ಕಚೇರಿಗೆ ದಿನಗೂಲಿ ನೌಕರನಾಗಿ ನೇಮಕಗೊಂಡಿದ್ದರು. 1993ರಲ್ಲಿ ಅವರ ಸೇವೆ ಕಾಯಂ ಮಾಡಲಾಗಿತ್ತು. 2018ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. ಅಲ್ಲಿಯವರೆಗೆ ಇತರ ನೌಕರರಂತೆ ನಿಗದಿತ ಶ್ರೇಣಿಯ ಅನುಸಾರ ಪ್ರತಿ ತಿಂಗಳು ವೇತನ ಪಡೆಯುತ್ತಿದ್ದರು. ಹೀಗಾಗಿ, ಸೇವೆಗೆ ಅನುಗುಣವಾಗಿ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, 2013ರಲ್ಲಿ ಕಾಯಂ ನೇಮಕ ಆದೇಶ ಹಿಂಪಡೆದಿದ್ದ ಕಾರಣ ರಾಜ್ಯ ಸರ್ಕಾರ ಅವರಿಗೆ ಪಿಂಚಣಿ ನೀಡಿರಲಿಲ್ಲ.
ಇದರಿಂದ ಜಾಧವ್ ಕೆಎಸ್‌ಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಿಗೆ ಎರಡು ತಿಂಗಳಲ್ಲಿ ಪಿಂಚಣಿ ಪಾವತಿಸಬೇಕು ಎಂದು 2021ರ ಅಕ್ಟೋಬರ್ 29ರಂದು ಸರ್ಕಾರಕ್ಕೆ ಕೆಎಸ್ಎಟಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸರ್ಕಾರ ತಕರಾರು ಅರ್ಜಿ ಸಲ್ಲಿಸಿತ್ತು.
ಸರ್ಕಾರದ ಈ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ ಹೈಕೋರ್ಟ್, ಜಾಧವ್ ಅವರು 35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತಿಯಾಗಿದ್ದಾರೆ. ಅವರಿಗೆ ಸೇವಾ ಸೌಲಭ್ಯ ಕಲ್ಪಿಸುವುದು ಉಪಕಾರ ಮಾಡಿದಂತಲ್ಲ. ಸದ್ಯ ಜೀವನ ಸಂಧ್ಯಾಕಾಲದಲ್ಲಿರುವ ಅವರು, ಪಿಂಚಣಿಗಾಗಿ ಇನ್ನೆಷ್ಟು ದಿನ ಕಾಯುತ್ತಾರೆ.
ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂಬುದು ಗೊತ್ತಿಲ್ಲ. ರಕ್ತಕ್ಕಿಂತ ರೊಟ್ಟಿಯೇ ದುಬಾರಿಯಾಗಿರುವ ಈ ಕಾಲದಲ್ಲಿ 2018ರಲ್ಲಿ ನಿವೃತ್ತಿಯಾಗಿರುವ ಅವರು ಪಿಂಚಣಿಗಾಗಿ ತಮ್ಮ ದೇಹ ಮತ್ತು ಆತ್ಮವನ್ನು ಒಟ್ಟಾಗಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವಿಳಂಬ ಮಾಡದೆ ಅವರು ಕೊನೆಯದಾಗಿ ಪಡೆದ ಸಂಬಳ ಆಧರಿಸಿ ಪಿಂಚಣಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಟ್ಟುನಿಟ್ಟಿನಿ ಆದೇಶ ಮಾಡಿದೆ.