ತಮ್‌ಲುಕ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಪುರ್ಬಾ ಮೇದಿನಿಪುರದ ತಮ್‌ಲುಕ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಮತ್ತು ಬಿಜೆಪಿ ಲಾಂಛನ
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಮತ್ತು ಬಿಜೆಪಿ ಲಾಂಛನ

ಕೆಲ ದಿನಗಳ ಹಿಂದೆ ತಮ್ಮ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 

ಪುರ್ಬಾ ಮೇದಿನಿಪುರದ ತಮ್‌ಲುಕ್‌ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯುವ ನಾಯಕ ದೆಬಾಂಗ್ಸು ಭಟ್ಟಾಚಾರ್ಯ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಅವರನ್ನು ಕಣಕ್ಕಿಳಿಸಲಾಗಿದೆ. 

ವಿಶೇಷವೆಂದರೆ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು 2009 ಮತ್ತು 2014ರಲ್ಲಿ ಎರಡು ಬಾರಿ ಈ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ 2016ರಲ್ಲಿ ಅವರು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರ ಸಹೋದರ ದಿಬ್ಯೇಂದು ಅಧಿಕಾರಿ 2016 ಮತ್ತು 2019ರಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಎರಡು ಬಾರಿ ಅಧಿಕಾರಕ್ಕೇರಿದ್ದರು.

Also Read
ವಿವಾದಗಳಿಗೆ ಹೊಸಬರಲ್ಲ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ

ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನ್ಯಾ. ಅಭಿಜಿತ್‌ ಅವರು ಬರುವ ಆಗಸ್ಟ್‌ನಲ್ಲಿ ನಿವೃತ್ತರಾಗಬೇಕಿತ್ತು. ಆದರೆ ಮಾರ್ಚ್ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇದಕ್ಕೂ ಮೊದಲು ಮಾರ್ಚ್ 3ರಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ರಾಜೀನಾಮೆ ಬಳಿಕ ರಾಜಕೀಯ ರಂಗ ಪ್ರವೇಶಿಸುವುದಾಗಿ ಹೇಳಿದ್ದರು.

ನ್ಯಾ. ಅಭಿಜಿತ್‌ ಅವರು ರಾಜೀನಾಮೆ ನೀಡುವ ಕೆಲ ದಿನಗಳ ಮುನ್ನ ಕೂಡ ವಿವಾದಾತ್ಮಕ ಆದೇಶಗಳು ಮತ್ತು ಹೇಳಿಕೆಗಳಿಂದ ಸುದ್ದಿಯಲ್ಲಿದ್ದರು. ಕಲ್ಕತ್ತಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸೌಮೆನ್‌ ಸೇನ್‌ ಅವರು ರಾಜ್ಯದ ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗುರುತರ ಆರೋಪ ಮಾಡಿದ್ದರು.

ಪ್ರಕರಣವೊಂದರ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾ. ಅಭಿಜಿತ್‌ ನೀಡಿದ್ದ ಆದೇಶವನ್ನು ನ್ಯಾ. ಸೌಮೆನ್‌ ನೇತೃತ್ವದ ವಿಭಾಗೀಯ ಪೀಠ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ಆರೋಪ ಮಾಡಿದ್ದರು.

ನಂತರ ಅದೇ ದಿನ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅಭಿಜಿತ್‌ ಅವರಿದ್ದ ಏಕಸದಸ್ಯ ಪೀಠ ʼವಿಭಾಗೀಯ ಪೀಠ ನೀಡಿದ ಆದೇಶದ ಬಗ್ಗೆ ತನಗೆ ಮಾಹಿತಿ ಇಲ್ಲ. ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಬೇಕುʼ ಎಂದು ರಾಜ್ಯದ ಅಡ್ವೊಕೇಟ್‌ ಜನರಲ್‌ ಅವರಿಗೆ ತಾಕೀತು ಮಾಡಿತ್ತು.

ವಿಶೇಷವೆಂದರೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿರಲಿಲ್ಲ. ಆದರೂ ನ್ಯಾ. ಅಭಿಜಿತ್‌ ಪ್ರಕರಣವನ್ನು ಸಿಬಿಐ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭಾಗಿಯಾಗಿರುವ ವಿಷಯಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರನ್ನು ನ್ಯಾಯಮೂರ್ತಿ ಸೌಮೆನ್‌ ಅವರು ತಮ್ಮ ಕೊಠಡಿಗೆ ಕರೆದು ಅಭಿಷೇಕ್ ಬ್ಯಾನರ್ಜಿ ಅವರಿಗೆ ರಾಜಕೀಯ ಭವಿಷ್ಯವಿದ್ದು ಅವರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದರು ಎಂಬುದಾಗಿ ನ್ಯಾ. ಅಭಿಜಿತ್‌ ತಮ್ಮ ಆದೇಶದಲ್ಲಿ ಆರೋಪಿಸಿದ್ದರು.

ವಿಭಾಗೀಯ ಪೀಠದ ಆದೇಶ ಉಲ್ಲಂಘಿಸಿ ನ್ಯಾ. ಅಭಿಜಿತ್‌ ಅವರು ಆದೇಶ ನೀಡಿದ ಘಟನೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಎಲ್ಲಾ ವಿಚಾರಣೆಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು.

ಇದಕ್ಕೆ ಮೊದಲು ಕೂಡ ನ್ಯಾ. ಅಭಿಜಿತ್‌ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು. ವಿಸ್ತೃತ ಪೀಠದ ಆದೇಶಗಳ ನಿರ್ಲಕ್ಷ್ಯ ಮಾತ್ರವಲ್ಲದೆ, ರಾಜಕೀಯ ವಿಷಯಗಳ ಬಗ್ಗೆ ಸುದ್ದಿವಾಹಿನಿಗಳ ಜೊತೆ ಚರ್ಚೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಆದೇಶ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪಗಳು ನ್ಯಾ. ಅಭಿಜಿತ್‌ ಅವರ ವಿರುದ್ಧ ಕೇಳಿಬಂದಿದ್ದವು.

Related Stories

No stories found.
Kannada Bar & Bench
kannada.barandbench.com