ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇಮಕ

ನ್ಯಾ. ಮದನ್‌ ಲೋಕೂರ್‌ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಅಂದರೆ ನವೆಂಬರ್ 12, 2028ರವರೆಗೆ ನೇಮಕ ಮಾಡಲಾಗಿದೆ.
Justice(retd.) Madan Lokur
Justice(retd.) Madan LokurFile Photo
Published on

ವಿಶ್ವಸಂಸ್ಥೆಯು ಭಾರತದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕೂರ್‌ ಅವರನ್ನು ಆಂತರಿಕ ನ್ಯಾಯದಾನ ಮಂಡಳಿಯ (ಐಜೆಸಿ) ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಿದೆ.

ನ್ಯಾ. ಲೋಕೂರ್‌ ಅವರ ಅವಧಿಯು ನವೆಂಬರ್ 12, 2028ರವರೆಗೆ ಇರಲಿದೆ. “ಆಂತರಿಕ ನ್ಯಾಯ ಮಂಡಳಿಗೆ ಮುಖ್ಯಸ್ಥರಾಗಿ ನಿಮ್ಮನ್ನು ನೇಮಕ ಮಾಡಲು ಹರ್ಷಿಸುತ್ತಿದ್ದೇನೆ. ನಿಮ್ಮ ಅಧಿಕಾರವಧಿಯು ನವೆಂಬರ್ 12, 2028ರವರೆಗೆ ಅವಧಿ ಇರಲಿದೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಪತ್ರದಲ್ಲಿ ತಿಳಿಸಿದ್ದಾರೆ.

ಸಮಿತಿಗೆ ನೇಮಕಗೊಂಡಿರುವ ಇತರ ಸದಸ್ಯರ ವಿವರ ಈ ರೀತಿ ಇದೆ: ಉರುಗ್ವೆಯ ಕಾರ್ಮೆನ್‌ ಅರ್ಟಿಗಾಸ್‌ ಅವರನ್ನು ಸಿಬ್ಬಂದಿಯು ಬಾಹ್ಯ ನ್ಯಾಯಶಾಸ್ತ್ರಜ್ಞರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ; ಆಸ್ಟ್ರೇಲಿಯಾದ ರೋಸಲಿ ಬಾಲ್ಕಿನ್‌ ಅವರನ್ನು ಬಾಹ್ಯ ನ್ಯಾಯಶಾಸ್ತ್ರಜ್ಞರನ್ನಾಗಿ ಆಡಳಿತ ಮಂಡಳಿ ನಾಮನಿರ್ದೇಶನ ಮಾಡಿದೆ; ಆಸ್ಟ್ರಿಯಾದ ಸ್ಟೀಫನ್‌ ಬ್ರೆಜಿನಾ ಅವರು ಸಿಬ್ಬಂದಿ ಪ್ರತಿನಿಧಿಯಾಗಿ; ಅಮೆರಿಕಾದ ಜೇ ಪೊಜೆನೆಲ್‌ ಅವರನ್ನು ಆಡಳಿತ ಮಂಡಳಿ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗಿದೆ.

ವಿಶ್ವಸಂಸ್ಥೆಯ ನ್ಯಾಯದಾನ ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ, ವೃತ್ತಿಪರತೆ ಮತ್ತು ಹೊಣೆಗಾರಿಕೆ ತರುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹೊಸ ಆಂತರಿಕ ವ್ಯವಸ್ಥೆಯಾದ ಐಜೆಸಿಯನ್ನುಅಸ್ತಿತ್ವಕ್ಕೆ ತಂದಿದೆ.

Also Read
ಪೆಗಾಸಸ್‌ ಹಗರಣ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ ಸರ್ಕಾರ

ನ್ಯಾ. ಮದನ್‌ ಲೋಕೂರ್‌ ಅವರು ಡಿಸೆಂಬರ್‌ 31, 2018ರಂದು ಆರು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ನಂತರ ನಿವೃತ್ತರಾಗಿದ್ದರು. 1977ರ ಜುಲೈನಲ್ಲಿ ಲೋಕೂರ್‌ ಅವರು ವಕೀಲಿಕೆ ಆರಂಭಿಸಿದ್ದು, ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡಿದ್ದರು. 1981ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಆಗಿದ್ದ ನ್ಯಾ. ಲೋಕೂರ್‌ ಅವರು 1997ರಲ್ಲಿ ಹಿರಿಯ ವಕೀಲರಾಗಿ ನೇಮಕವಾಗಿದ್ದರು.

1998ರಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕವಾಗಿದ್ದ ಅವರು 1999ರ ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗೆ ಆ ಹುದ್ದೆಯಲ್ಲಿದ್ದರು. 1999ರ ಜುಲೈನಲ್ಲಿ ಕಾಯಂಗೊಂಡಿದ್ದ ನ್ಯಾ. ಲೋಕೂರ್‌ ಅವರು ಆನಂತರ ಗುವಾಹಟಿ, ಬಳಿಕ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದರು. ಆನಂತರ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

Kannada Bar & Bench
kannada.barandbench.com