ನನ್ನ ವ್ಯಕ್ತಿತ್ವ ರೂಪಿಸಿದ್ದು ಆರ್‌ಎಸ್‌ಎಸ್‌: ನಿವೃತ್ತಿ ಸಂದರ್ಭದಲ್ಲಿ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಮೆಚ್ಚುಗೆ

ತಾನು ನ್ಯಾಯಾಧೀಶನಾದ ಬಳಿಕ ಆರ್‌ಎಸ್‌ಎಸ್‌ನಿಂದ ದೂರವಿದ್ದು ಎಲ್ಲಾ ಪ್ರಕರಣ ಮತ್ತು ವ್ಯಾಜ್ಯಗಳನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿದ್ದಾಗಿ ಅವರು ಇದೇ ವೇಳೆ ತಿಳಿಸಿದರು.
Justice Chitta Ranjan Dash
Justice Chitta Ranjan Dash

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತಮ್ಮ ವ್ಯಕ್ತಿತ್ವ ರೂಪಿಸಿದ್ದು ತಮ್ಮೊಳಗೆ ಧೈರ್ಯ ಮತ್ತು ದೇಶಭಕ್ತಿ ತುಂಬಿದೆ ಎಂದು ಸೋಮವಾರ ಕಲ್ಕತ್ತಾ ಹೈಕೋರ್ಟ್‌ನಿಂದ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ತಿಳಿಸಿದರು.

ಬಾಲ್ಯದಿಂದಲೂ ತನಗೆ ಆರ್‌ಎಸ್‌ಎಸ್‌ ಸಂಪರ್ಕ ಇತ್ತು ಎಂದು ಅವರು ಹೇಳಿದರು.

"ಇಂದು, ನಾನು ನನ್ನ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸಬೇಕು. ನಾನು ಸಂಸ್ಥೆಯೊಂದಕ್ಕೆ ಬಹಳಷ್ಟು ಋಣಿಯಾಗಿದ್ದೇನೆ. ನಾನು ನನ್ನ ಬಾಲ್ಯದಿಂದ ಯೌವನ ತಲುಪುವವರೆಗೂ ಅದರೊಂದಿಗಿದ್ದೆ. ನಾನು ಧೈರ್ಯಶಾಲಿಯಾಗಿರಲು, ನೇರವಾಗಿರಲು, ಇತರರನ್ನು ಸಮಾನವಾಗಿ ನೋಡುವುದನ್ನು ಕಲಿಯಲು ಎಲ್ಲಕ್ಕಿಂತ ಮಿಗಿಲಾಗಿ ಎಲ್ಲಿ ಕೆಲಸ ಮಾಡುವಿರೋ ಅಲ್ಲಿ ದೇಶಭಕ್ತಿ ಮತ್ತು ಬದ್ಧತೆಯ ಪ್ರಜ್ಞೆಯನ್ನು ಮೆರೆಯಲು ಕಲಿತಿದ್ದೇನೆ. ನಾನು ಆರ್‌ಎಸ್‌ಎಸ್‌ನ ಸದಸ್ಯನಾಗಿದ್ದೆ ಮತ್ತು ಆಗಿದ್ದೇನೆ ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಬೇಕು" ಎಂದು ಅವರು ನುಡಿದರು.  

ತಾನು ನ್ಯಾಯಾಧೀಶನಾದ ಬಳಿಕ ಆರ್‌ಎಸ್‌ಎಸ್‌ನಿಂದ ದೂರವಿದ್ದು ಎಲ್ಲಾ ಪ್ರಕರಣ ಮತ್ತು ವ್ಯಾಜ್ಯಗಳನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿದ್ದಾಗಿ ಅವರು ಇದೇ ವೇಳೆ ತಿಳಿಸಿದರು.

ನನ್ನ ಕೆಲಸದ ಕಾರಣಕ್ಕೆ ನಾನು ಸುಮಾರು 37 ವರ್ಷ ಸಂಘಟನೆಯಿಂದ ದೂರವಿದ್ದೆ. ನನ್ನ ವೃತ್ತಿಜೀವನದ ಯಾವುದೇ ಪ್ರಗತಿಗೆ ನಾನು ಎಂದಿಗೂ ನನ್ನ ಸಂಸ್ಥೆಯ ಸದಸ್ಯತ್ವವನ್ನು ಬಳಸಲಿಲ್ಲ, ಏಕೆಂದರೆ ಅದು ನಮ್ಮ ಸಿದ್ಧಾಂತಕ್ಕೆ ವಿರುದ್ಧ, ನಾನು ಎಲ್ಲರನ್ನು ಸಮಾನವಾಗಿ ನಡೆಸಿಕೊಂಡಿದ್ದೇನೆ. ಕಮ್ಯುನಿಸ್ಟ್ ವ್ಯಕ್ತಿಯಾಗಿರಲಿ, ಬಿಜೆಪಿ, ಕಾಂಗ್ರೆಸ್‌ ಅಥವಾ ಟಿಎಂಸಿಯ ವ್ಯಕ್ತಿಯಾಗಿರಲಿ, ನಾನು ಯಾರ ವಿರುದ್ಧವೂ ಪಕ್ಷಪಾತದಿಂದ ನಡೆದುಕೊಳ್ಳಲಿಲ್ಲ. ಎಲ್ಲರೂ ನನ್ನೆದುರು ಸಮಾನರಾಗಿದ್ದರು. ಎರಡು ತತ್ವಗಳ ಆಧಾರದಲ್ಲಿ ನಾನು ನ್ಯಾಯ ನೀಡಲು ಯತ್ನಿಸಿದೆ: ಒಂದು ಪರಾನುಭೂತಿ ಮತ್ತು ಎರಡನೆಯದು ನ್ಯಾಯ ನೀಡಲು  ಕಾನೂನನ್ನು ಬಗ್ಗಿಸಬಹುದಾದರೂ ನ್ಯಾಯವನ್ನು ಕಾನೂನಿಗೆ ಸರಿಹೊಂದುವಂತೆ ಬಗ್ಗಿಸಲಾಗುವುದಿಲ್ಲ ಎಂದು ಅವರು ಹೇಳಿದರು. ನ್ಯಾ. ಚಿತ್ತ ರಂಜನ್ ದಾಶ್‌ ಅವರು ಒಡಿಶಾ ಮೂಲದವರು.

ಇತ್ತೀಚೆಗೆ, ಕಲ್ಕತ್ತಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಬಿಜೆಪಿ ಸೇರಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ಜಿಲ್ಲೆಯ ತಮ್‌ಲುಕ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Kannada Bar & Bench
kannada.barandbench.com