ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕರ ವಸ್ತುವಿಷಯವನ್ನು ಮರುಟ್ವೀಟ್ ಮಾಡುವುದು ಇಲ್ಲವೇ ಪುನಃ ಪೋಸ್ಟ್ ಮಾಡುವುದು ಕ್ರಿಮಿನಲ್ ಮಾನಹಾನಿ ಸೇರಿದಂತೆ ಮಾನನಷ್ಟದ ಅಪರಾಧವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಯಾರೋ ಟ್ವೀಟ್ ಮಾಡಿದ್ದನ್ನು ಬೇರೊಬ್ಬರು ಮರುಟ್ವೀಟ್ ಮಾಡಿದರೂ ಮಾನನಷ್ಟವಾಗುತ್ತದೆಯೇ ಎಂಬ ಅಂಶದ ಬಗ್ಗೆ ಕಾನೂನು ಏನೂ ಹೇಳುವುದಿಲ್ಲವಾದರೂ ಡಿಜಿಟಲ್ ಯುಗದಲ್ಲಿ, ಮಾನಹಾನಿಕರ ವಿಷಯವನ್ನು ಮರುಟ್ವೀಟ್ ಮಾಡಿದರೆ ಅದು ಮಾನನಷ್ಟದ ಆರೋಪಗಳನ್ನು ದೊಡ್ಡದಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದು ವ್ಯಕ್ತಿಗೆ ಇರುವ ಒಳ್ಳೆಯ ಹೆಸರಿನ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು ಎಂದು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಹೇಳಿದರು.
ಎಕ್ಸ್ (ಟ್ವಿಟರ್) ನಲ್ಲಿ ಸಾಕಷ್ಟು ಫಾಲೋವರ್‌ಗಳಿರುವ ವ್ಯಕ್ತಿ ಹೇಳಿಕೆಯೊಂದನ್ನು ರಿಟ್ವೀಟ್ ಮಾಡಿದಾಗ, ಮೂಲ ಟ್ವೀಟ್‌ನಲ್ಲಿರುವುದನ್ನು ಅನುಮೋದಿಸಲಾಗಿದೆ ಅಥವಾ ಅಂಗೀಕರಿಸಲಾಗಿದೆ ಎಂದು ಜನಸಾಮಾನ್ಯರು ಭಾವಿಸುತ್ತಾರೆ ಎಂಬುದಾಗಿ ಪೀಠ ನುಡಿದಿದೆ.
ಹೀಗಾಗಿ, ಮಾನಹಾನಿಕರ ವಿಷಯವನ್ನು ಮರುಟ್ವೀಟ್ ಮಾಡುವ ವ್ಯಕ್ತಿ ʼಈ ಟ್ವೀಟ್‌ಗೆ ತಾನು ಹೊಣೆಗಾರನಲ್ಲʼ ಎಂದು ಹಕ್ಕು ನಿರಾಕರಣೆಯನ್ನು ಉಲ್ಲೇಖಿಸದಿದ್ದರೆ ದಂಡ, ಸಿವಿಲ್ ಮತ್ತು ಕಠಿಣ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಯೂಟ್ಯೂಬರ್ ಧ್ರುವ್ ರಾಠಿ ಮಾಡಿದ 'ಬಿಜೆಪಿ ಐಟಿ ಸೆಲ್ ಪಾರ್ಟ್ 2' ಎಂಬ ವೀಡಿಯೊವನ್ನು ಮರು ಟ್ವೀಟ್ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗ ಮತ್ತು 'ಐ ಸಪೋರ್ಟ್ ನರೇಂದ್ರ ಮೋದಿ' ಎಂಬ ಸಾಮಾಜಿಕ ಮಾಧ್ಯಮ ಪುಟ ಸ್ಥಾಪಕ ವಿಕಾಸ್ ಸಾಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದೇಶದ ವೇಳೆ ನ್ಯಾಯಾಲಯ ಮಾಡಿದ ಎಂಟು ಮಹತ್ವದ ಅವಲೋಕನಗಳು ಹೀಗಿವೆ:
ಭಾರತೀಯ ದಂಡ ಸಂಹಿತೆಯ (ಕ್ರಿಮಿನಲ್ ಮಾನಹಾನಿ) ಸೆಕ್ಷನ್ 499 ರಲ್ಲಿ ಒಳಗೊಂಡಿರುವ 'ಪ್ರಕಟಿಸುವುದು' ಅಥವಾ 'ಪ್ರಕಟಣೆ' ಎಂಬ ಪದಗಳು ಮಾನಹಾನಿಕರ ಆರೋಪಗಳನ್ನು ಮರುಟ್ವೀಟ್ ಮಾಡುವ ಕ್ರಿಯೆಯನ್ನು ಒಳಗೊಂಡಿರುತ್ತವೆ;
ಮಾನಹಾನಿಕರ ವಿಷಯವನ್ನು ಮರುಟ್ವೀಟ್ ಮಾಡುವ ವ್ಯಕ್ತಿ ʼಈ ಟ್ವೀಟ್‌ಗೆ ತಾನು ಹೊಣೆಗಾರನಲ್ಲʼ ಎಂದು ಹಕ್ಕು ನಿರಾಕರಣೆಯನ್ನು ಉಲ್ಲೇಖಿಸದಿದ್ದರೆ ದಂಡ, ಸಿವಿಲ್ ಮತ್ತು ಕಠಿಣ ಕ್ರಮ ಜರುಗಿಸಬೇಕು:
ಮಾನನಷ್ಟಕರ ವಿಚಾರಗಳನ್ನು ರಿಟ್ವೀಟ್ ಮಾಡುವ ಎಲ್ಲಾ ಕ್ರಿಯೆಗಳು ಮಾನಹಾನಿಕರ ಆರೋಪಗಳ ಪ್ರಕಟಣೆಗೆ ಸಮನಾಗಿದ್ದರೂ, ಪೀಡಿತ ವ್ಯಕ್ತಿಯ ಪ್ರತಿಷ್ಠೆಗೆ ಉಂಟಾಗುವ ಹಾನಿಯ ಪ್ರಮಾಣವು ರೀಟ್ವೀಟ್ ಬೀರುವ ಪ್ರಭಾವದ ಮಟ್ಟ ಮತ್ತು ಅಂತಹ ಮಾನಹಾನಿಕರ ಆರೋಪಗಳನ್ನು ಮರುಟ್ವೀಟ್ ಮಾಡುವ ವ್ಯಕ್ತಿಯ ಸಂಭಾವ್ಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ;
ಯಾವ ರಿಟ್ವೀಟ್ ತನ್ನ ಪ್ರತಿಷ್ಠೆಗೆ ಹೆಚ್ಚು ಹಾನಿಯನ್ನುಂಟುಮಾಡಿತು ಮತ್ತು ಸಮಾಜದ ಸದಸ್ಯರಲ್ಲಿ ತನ್ನ ನೈತಿಕತೆ ಅಥವಾ ಬೌದ್ಧಿಕತೆಯನ್ನು ಅಥವಾ ಅವನ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿತು ಎಂಬುದನ್ನು ಅಂತಿಮವಾಗಿ ಮಾನನಷ್ಟ ಅನುಭವಿಸಿದ ವ್ಯಕ್ತಿ ನಿರ್ಧರಿಸಬೇಕು;
ಮಾನಹಾನಿಕರ ವಸ್ತುವಿಷಯದ ಮೂಲ ಲೇಖಕರ ವಿರುದ್ಧ ದೂರು ದಾಖಲಾದರೆ ಯಾವುದೇ ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ. ಅಂತಹ ವಿಷಯವನ್ನು ಮರುಟ್ವೀಟ್ ಮಾಡಿದ ವ್ಯಕ್ತಿಯು ವಸ್ತುವಿಷಯವನ್ನು ತನ್ನ ಹೆಚ್ಚಿನ ಸ್ನೇಹಿತರು ಅಥವಾ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದರಿಂದ ತನಗೆ ಅದರಿಂದ ಹೆಚ್ಚಿನ ಹಾನಿಯನ್ನುಂಟು ಮಾಡಿದ್ದಾನೆಯೇ, ಇಲ್ಲವೇ ಎಂಬುದನ್ನು ನಿರ್ಧರಿಸುವುದು ದೂರುದಾರರ ಆಯ್ಕೆಯಾಗಿದೆ.
ರಾಜಕೀಯ ವ್ಯಕ್ತಿ ಅಥವಾ ಸಾರ್ವಜನಿಕ ವ್ಯಕ್ತಿ ಅಥವಾ ಸಾಮಾಜಿಕ ಪ್ರಭಾವಶಾಲಿ ವ್ಯಕ್ತಿಯು ಅವನ / ಅವಳ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೆಲವು ವಿಷಯವನ್ನು ಪೋಸ್ಟ್ ಮಾಡಿದಾಗ ಉಂಟಾಗುವ ಪರಿಣಾಮಗಳನ್ನು ಮತ್ತು ಅದು ಪೀಡಿತ ವ್ಯಕ್ತಿಗೆ ಉಂಟುಮಾಡಬಹುದಾದ ಹಾನಿಯನ್ನು ಆತ ಅರ್ಥಮಾಡಿಕೊಂಡಿದ್ದಾನೆ ಎಂದು ಸಮಂಜಸವಾಗಿ ನಂಬಬಹುದಾಗಿದೆ;
ಒಂದು ರಾಜ್ಯದ ಮುಖ್ಯಮಂತ್ರಿಗೆ ದೊಡ್ಡಮಟ್ಟದ ಸಾಮಾಜಿಕ ಮಾಧ್ಯಮ ಅನುಯಾಯಿಗಳಿದ್ದು ಅವರು ಮುಖ್ಯಮಂತ್ರಿಗೆ ಇರುವ ವ್ಯಾಪಕ ವ್ಯಾಪ್ತಿಯನ್ನು ಸೂಚಿಸುತ್ತಾರೆ. ಮುಖ್ಯಮಂತ್ರಿ ಮಾಡುವ ರೀಟ್ವೀಟ್‌ಗೆ ಅವರ ಅನುಮೋದನೆ ಅಥವಾ ಸಮ್ಮತಿ ಇತ್ತು ಎಂದು ಅವರು ಭಾವಿಸುತ್ತಾರೆ.
ಮರುಟ್ವೀಟ್ ಮಾಡುವ ಅಥವಾ ಮರು ಪೋಸ್ಟ್ ಮಾಡುವ ಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಸಿದರೆ, ಅದು ಮಾನಹಾನಿಕರ ವಸ್ತುವಿಷಯವನ್ನು ಮರು ಪೋಸ್ಟ್ ಮಾಡಲು ಜನರನ್ನು ಪ್ರೋತ್ಸಾಹಿಸುತ್ತದೆ. ರಿಟ್ವೀಟ್ ಮಾಡುವ ಕ್ರಿಯೆಯೊಂದಿಗೆ ಜವಾಬ್ದಾರಿಯುತ ಪ್ರಜ್ಞೆಯೂ ಇರಬೇಕು.
ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಉಚ್ಚ ನ್ಯಾಯಾಲಯ ಎತ್ತಿಹಿಡಿದಿದ್ದು ಆದೇಶದಲ್ಲಿ ಯಾವುದೇ ನ್ಯೂನತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]