ಚುನಾವಣಾ ಬಾಂಡ್ ಹಣ ಮುಟ್ಟುಗೋಲು ಮನವಿ ವಜಾ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ

ನ್ಯಾಯಾಲಯ 2024ರ ಆಗಸ್ಟ್ನಲ್ಲಿ ಚುನಾವಣಾ ಬಾಂಡ್ ಯೋಜನೆಯ ದುರುಪಯೋಗದ ಬಗ್ಗೆ ಎಸ್ಐಟಿ ತನಿಖೆ ನಡೆಸುವಂತೆ ಕೋರಿದ್ದ ಮನವಿ ವಜಾಗೊಳಿಸಿತ್ತು.
Supreme Court, Electoral Bonds Supreme court
Supreme Court, Electoral Bonds Supreme court
Published on

ಅಸಾಂವಿಧಾನಿಕವೆಂದು ಘೋಷಿತವಾದ ಚುನಾವಣಾ ಬಾಂಡ್‌ ಯೋಜನೆಯಡಿ  ರಾಜಕೀಯ ಪಕ್ಷಗಳು ಪಡೆದ ₹ 16,518 ಕೋಟಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿದ್ದ ಮನವಿ ವಜಾಗೊಳಿಸಿ ಆಗಸ್ಟ್ 2, 2024ರಲ್ಲಿ ಸುಪ್ರೀಂ ಕೋರ್ಟ್‌ ಪ್ರಕಟಿಸಿದ್ದ ತೀರ್ಪು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.

ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ದಾನಿಗಳ ನಡುವೆ ಹಣ ವಿನಿಮಯವಾಗಿದೆ. 23 ರಾಜಕೀಯ ಪಕ್ಷಗಳು 1,210 ದಾನಿಗಳಿಂದ ಸುಮಾರು ₹12,516 ಕೋಟಿ ದಾನ ಪಡೆದಿವೆ. 21 ದಾನಿಗಳು ತಲಾ ₹100 ಕೋಟಿಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ನ್ಯಾಯವಾದಿ ಡಾ.ಖೇಮ್ ಸಿಂಗ್ ಭಾಟಿ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

Also Read
ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ಕೇಂದ್ರ ಸಚಿವರಾದ ನಿರ್ಮಲಾ, ನಡ್ಡಾ ವಿರುದ್ಧದ ಎಫ್‌ಐಆರ್‌ ರದ್ದು

ಅರ್ಜಿಯಲ್ಲಿ ಅತಿ ಹೆಚ್ಚು ದೇಣಿಗೆ ಪಡೆಯುವ ಐದು ರಾಜಕೀಯ ಪಕ್ಷಗಳನ್ನು ಪಟ್ಟಿ ಮಾಡಲಾಗಿದೆ:

ಬಿಜೆಪಿ: ₹5,594 ಕೋಟಿ

ಟಿಎಂಸಿ: ₹1,592 ಕೋಟಿ

ಐಎನ್‌ಸಿ: ₹1,351 ಕೋಟಿ

ಬಿಆರ್‌ಎಸ್: ₹1,191 ಕೋಟಿ

ಡಿಎಂಕೆ: ₹632 ಕೋಟಿ  

ಹೀಗಾಗಿ, ರಾಜಕೀಯ ಪಕ್ಷಗಳು ಯೋಜನೆಯಡಿ ಪಡೆದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ, ಭಾರತದ ಚುನಾವಣಾ ಆಯೋಗ ಮತ್ತು ಕೇಂದ್ರ ಜಾಗೃತ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಜೊತೆಗೆ ಪ್ರಮುಖ ರಾಜಕೀಯ ಪಕ್ಷಗಳು ದಾನಿಗಳಿಗೆ ಒದಗಿಸಿದ ಅಕ್ರಮ ಸವಲತ್ತುಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸುವಂತೆ ಕೋರಲಾಗಿದೆ. ಈ ಪಕ್ಷಗಳು ಪಡೆದ ತೆರಿಗೆ ವಿನಾಯಿತಿಗಳ ಮರುಮೌಲ್ಯಮಾಪನವನ್ನು ಮತ್ತು ಸ್ವೀಕರಿಸಿದ ಮೊತ್ತದ ಮೇಲೆ ತೆರಿಗೆ, ಬಡ್ಡಿ ಹಾಗೂ ದಂಡ ವಿಧಿಸುವಂತೆ ಅರ್ಜಿ ವಿನಂತಿಸಿದೆ.

ದಾನಿಗಳು ರಾಜಕೀಯ ಪಕ್ಷಗಳ ನಡುವಿನ ಕೊಡುಕೊಳ್ಳುವಿಕೆ ಮೂಲಕ ಚುನಾವಣಾ ದುರುಪಯೋಗ ನಡೆಯುವ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ವಜಾಗೊಳಿಸಿತ್ತು.

Also Read
ಕೇಂದ್ರ ಸಚಿವೆ ನಿರ್ಮಲಾ, ನಡ್ಡಾ ವಿರುದ್ಧದ ಚುನಾವಣಾ ಬಾಂಡ್‌ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

‘ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ನಮ್ಮ ಅಧಿಕಾರ ವ್ಯಾಪ್ತಿ ಚಲಾಯಿಸಲು ನಾವು ನಿರಾಕರಿಸುತ್ತೇವೆʼ ಎಂದು ಆಗ ಅದು ಹೇಳಿತ್ತು.  

ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ದಿನಾಂಕದಂದಿನಂತೆ, ಅಂತಹ ಖರೀದಿಗೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಸಂಸತ್ತಿನಿಂದ ಜಾರಿಗೆ ತಂದ ಶಾಸನಬದ್ಧ ಕಾಯಿದೆಯ ಅಭಯವಿತ್ತು ಎನ್ನುವ ಅಂಶವನ್ನು ನ್ಯಾಯಾಲಯ ಪರಿಗಣಿಸಿತ್ತು. ಈ ಹಂತದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರ ಹಿಂದೆ ಕೊಡುಕೊಳ್ಳುವಿಕೆ ಇದೆ ಎಂಬ ಊಹೆಗಳು ಮಾತ್ರ ಇವೆ ಎಂದು ತನಿಖೆಗೆ ನಿರ್ದೇಶಿಸಲು ನಿರಾಕರಿಸಿತ್ತು.

Kannada Bar & Bench
kannada.barandbench.com