
ಕಿರಿಯರ ವಿಭಾಗದ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಯಾಗಲು 3 ವರ್ಷ ವಕೀಲಿಕೆ ಮಾಡಿರುವುದು ಕಡ್ಡಾಯ ಎಂದು ನೀಡಲಾಗಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ [ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ಈ ಷರತ್ತು ವಿಧಿಸುವುದರಿಂದ 14 ಮತ್ತು 16 ನೇ ವಿಧಿಗಳ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತವೆ ಎಂದು ವಾದಿಸಿ ವಕೀಲ ಚಂದ್ರಸೇನ್ ಯಾದವ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಹಿಂದಿನ ಅರ್ಹತಾ ಮಾನದಂಡಗಳ ಅಡಿಯಲ್ಲಿ ತಯಾರಿ ನಡೆಸಿದ್ದ ಇತ್ತೀಚಿನ ಪದವೀಧರರು (2023–2025) ಇದರಿಂದ ಅನ್ಯಾಯಯುತವಾಗಿ ಅವಕಾಶ ವಂಚಿತರಾಗುವುದನ್ನು ತಪ್ಪಿಸಲು 2027ರಿಂದಷ್ಟೇ ಮೂರು ವರ್ಷಗಳ ಪ್ರಾಕ್ಟಿಸ್ ನಿಯಮವನ್ನು ಜಾರಿಗೆ ತರಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಯಾಗಲು 3 ವರ್ಷ ವಕೀಲಿಕೆ ಮಾಡಿರುವುದು ಕಡ್ಡಾಯ ಎಂದು ಮೇ 20ರಂದು ನೀಡಿದ ತನ್ನ ತೀರ್ಪಿನಲ್ಲಿ, ಸಿಜೆಐ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಎ ಜಿ ಮಸೀಹ್ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತಿಳಿಸಿತ್ತು.
ಆದರೆ ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಇದು ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತ್ತು. ಭವಿಷ್ಯದ ನೇಮಕಾತಿಗೆ ಮಾತ್ರ ಅನ್ವಯವಾಗುತ್ತದೆ ಎಂದಿತ್ತು.
ಆದರೆ ತೀರ್ಪನಿಂದಾಗಿ ಮಹಿಳಾ ಅಭ್ಯರ್ಥಿಗಳು ನ್ಯಾಯಾಂಗ ಹುದ್ದೆಗೆ ಏರುವುದನ್ನು ತಪ್ಪಿಸಬಹುದು ಇಲ್ಲವೇ ವಿಳಂಬಗೊಳಿಸುವಂತೆ ಒತ್ತಾಯಿಸಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ತೀರ್ಪು ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಆಕಾಂಕ್ಷಿಗಳ ಮೇಲೆ ತೀರ್ಪು ಅಸಮಾನ ಪರಿಣಾಮ ಬೀರುತ್ತದೆ ಎಂದು ಅರ್ಜಿ ಹೇಳಿದೆ.
ಹೊಸ ಕಾನೂನು ಪದವೀಧರರು ಅಥವಾ ಮೂರು ವರ್ಷಗಳ ವಕೀಲಿಕೆ ಅನುಭವವಿಲ್ಲದ ಅಭ್ಯರ್ಥಿಗಳು ನ್ಯಾಯಾಧೀಶರಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ಯಾವುದೇ ಸಮಗ್ರ ದಾಖಲೆಯನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿಲ್ಲ ಎಂದು ಮನವಿ ದೂರಿದೆ.
ಎಲ್ಲಾ ರಾಜ್ಯಗಳು ಮತ್ತು ಹೈಕೋರ್ಟ್‌ಗಳಲ್ಲಿ ಏಕರೂಪವಾಗಿ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನ ರಾಜ್ಯ ಶಾಸಕಾಂಗಗಳು ಮತ್ತು ಸಾರ್ವಜನಿಕ ಸೇವಾ ಆಯೋಗಗಳ ಅಧಿಕಾರಗಳ ಮೇಲೆ ಅತಿಕ್ರಮಣವಾಗಿದೆ ಎಂದು ವಾದಿಸಲಾಗಿದೆ.