ದಾಸ್ತಾನಿನ ಮೇಲೆ ಪರಿಷ್ಕೃತ ಎಂಆರ್‌ಪಿ ಸ್ಟಿಕರ್: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Karnataka HC and Justice B M Shyam Prasad
Karnataka HC and Justice B M Shyam Prasad
Published on

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಉತ್ಪನ್ನಗಳ ತಯಾರಕರು ಮತ್ತು ಆಮದುದಾರರು ದಾಸ್ತಾನು ಉಳಿದಿರುವ ವಸ್ತು ಮತ್ತು ಉತ್ಪನ್ನಗಳ ಮೇಲೆ ಪರಿಷ್ಕೃತ ಚಿಲ್ಲರೆ ಮಾರಾಟ ದರ (ಎಂಆರ್‌ಪಿ) ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಮಾರ್ಗಸೂಚಿಗಳಿಗೆ ಏಕಪಕ್ಷೀಯವಾಗಿ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಸೆಪ್ಟೆಂಬರ್‌ 9ರಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು ಎಂದು ಕೋರಿ ಅಡುಗೆ ಹಾಗೂ ಗೃಹಬಳಕೆ ಉತ್ಪನ್ನಗಳ ಕಂಪೆನಿ ಟಿಟಿಕೆ ಪ್ರೆಸ್ಟೀಜ್ ಕಂಪೆನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಪ್ರತಿವಾದಿ ಕೇಂದ್ರ ಸರ್ಕಾರದ ವಾದ ಆಲಿಸದೆ ಏಕಪಕ್ಷೀಯವಾಗಿ ಮಾರ್ಗಸೂಚಿಗಳಿಗೆ ತಡೆ ನೀಡುವುದಿಲ್ಲ ಎಂದು ಹೇಳಿತು. ಅಲ್ಲದೇ ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ, ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿತು.

ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮಾರಾಟವಾಗದ ಉತ್ಪನ್ನಗಳ ಮೇಲಿನ ಎಂಆರ್‌ಪಿ ದರವನ್ನು 2025ರ ಡಿಸೆಂಬರ್‌ 31ರವರೆಗೆ ಅಥವಾ ಹಾಲಿ ಇರುವ ದಾಸ್ತಾನು ಖಾಲಿಯಾಗುವವರೆಗೆ ಪರಿಷ್ಕರಿಸಬಹುದು. ಪರಿಷ್ಕೃತ ಎಂಆರ್‌ಪಿ ಜಿಎಸ್‌ಟಿಯಿಂದ ಆದ ಬದಲಾವಣೆಯನ್ನು ಮಾತ್ರ ತೋರಿಸಬೇಕು. ತೆರಿಗೆಯಿಂದ ಆದ ಹೆಚ್ಚಳ ಮತ್ತು ಏರಿಕೆಯನ್ನು ಮಾತ್ರ ಆದರಲ್ಲಿ ತೋರಿಸಬೇಕು ಎಂದು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 9ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳು ಸೆಪ್ಟೆಂಬರ್‌ 22ರಿಂದ ಅನ್ವಯವಾಗಲಿವೆ ಎಂದು ಹೇಳಲಾಗಿತ್ತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Kannada Bar & Bench
kannada.barandbench.com