ಅತ್ಯಾಚಾರಕ್ಕೆ ತುತ್ತಾಗಿ ವೈದ್ಯೆಯೊಬ್ಬರು ಸಾವನ್ನಪ್ಪಿದ ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿನ ಘಟನಾ ಸ್ಥಳದಲ್ಲಿ ತುರ್ತಾಗಿ ಮರು ನವೀಕರಣ ನಡೆಸಿರುವುದರ ಅಗತ್ಯದ ಬಗ್ಗೆ ರಾಜ್ಯ ಸರ್ಕಾರವನ್ನು ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆಯಿಂದ ಉಂಟಾಗಿರುವ ವಿಧ್ವಂಸಕತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠ ನಡೆಸಿತು.
ಅಪರಾಧ ನಡೆದಿರುವ ಸ್ಥಳದಲ್ಲಿನ 'ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ' ಮರುನವೀಕರಣ ಕೆಲಸವನ್ನು ಕೈಗೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪೀಠ ಆದೇಶಿಸಿದೆ.
ಈ ಆರೋಪವನ್ನು ಸಾರಾಸಗಟವಾಗಿ ತಿರಸ್ಕರಿಸಿದ ರಾಜ್ಯ ಸರ್ಕಾರದ ವಕೀಲರು “ಘಟನೆ ನಡೆದ ಸ್ಥಳವನ್ನು ಒಡೆದು, ನಾಶಪಡಿಸಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಘಟನಾ ನಡೆದ ಸ್ಥಳದಲ್ಲಿ ನವೀಕರಣ ಕೆಲಸ ನಡೆದಿಲ್ಲ. ವೈದ್ಯರ ಶೌಚಾಲಯಗಳ ನವೀಕರಣ ಕೆಲಸ ನಡೆಯುತ್ತಿದೆ” ಎಂದರು.
ಆಗ ನ್ಯಾ. ಶಿವಜ್ಞಾನಂ ಅವರು “ಅಂಥ ತುರ್ತೇನಿದೆ?... ಯಾವುದಾದರೂ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೋಗಿ, ಅಲ್ಲಿ ಮಹಿಳೆಯರಿಗೆ ಶೌಚಾಲಯವಿದೆಯೇ ನೋಡಿ! ಇದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಾನು ಹೇಳುತ್ತಿದ್ದೇನೆ. ಲೋಕೋಪಯೋಗಿ ಇಲಾಖೆ ಏನು ಮಾಡಿದೆ?... ನಾವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುತ್ತೇವೆ. ಆರ್‌ಜಿ ಕರ್ ಆಸ್ಪತ್ರೆಯನ್ನು ಮುಚ್ಚಿ. ಅದೇ ಒಳ್ಳೆಯ ಕೆಲಸ. ಹನ್ನೆರಡು ತಾಸಿನಲ್ಲಿ ಶೌಚಾಲಯ ನಿರ್ಮಿಸಿಕೊಡಬೇಕು ಎಂಬ ಕತೆಗಳನ್ನು ಕಂಡಿದ್ದೇವೆ, ನ್ಯಾಯಾಲಯದ ಸಂಕೀರ್ಣಗಳಲ್ಲಿನ ಶೌಚಾಲಯಗಳ ಸ್ಥಿತಿ ಹೇಗಿದೆ ನೋಡಿ” ಎಂದು ಕಿಡಿಕಾರಿದರು.
ಇದಕ್ಕೆ ರಾಜ್ಯ ಸರ್ಕಾರದ ವಕೀಲರು “ಘಟನಾ ನಡೆದ ಸ್ಥಳದಲ್ಲಿನ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ಆ ಸ್ಥಳದಲ್ಲಿ ಯಾವುದೇ ನವೀಕರಣ ಕೆಲಸ ನಡೆಯುತ್ತಿಲ್ಲ” ಎಂದರು.
ಆಗ ನ್ಯಾಯಾಲಯವು “ನಿಮ್ಮ ಮಾತುಗಳನ್ನು ಒಪ್ಪುತ್ತೇವೆ. ಅದನ್ನು ದಾಖಲೆಯಲ್ಲಿ ಸಲ್ಲಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಲ್ಲಿಸಬೇಕು. ಇದನ್ನು ನಾವು ತೆರೆದ ಮನಸ್ಸಿನಿಂದ ಆಲಿಸುತ್ತೇವೆ” ಎಂದಿತು.
ಮುಂದುವರಿದು ನ್ಯಾಯಮೂರ್ತಿಗಳು, “ಪಶ್ಚಿಮ ಬಂಗಾಳದ ಪ್ರಜೆಯಾಗಿ, ಇಲ್ಲೇ ಹುಟ್ಟಿ ಬೆಳೆದಿರುವುದರಿಂದ ಈ ಘಟನೆ ನಿಮ್ಮನ್ನು ವಿಚಲಿತರನ್ನಾಗಿಸಬೇಕು. ಇದು ನಿಮಗೂ ನೋವು ಉಂಟು ಮಾಡಬೇಕು. ನನಗೆ ನೋವುಂಟಾಗಿದೆ” ಎಂದರು.
ಆಗ ಸರ್ಕಾರದ ವಕೀಲರು “ಘಟನೆ ನಮಗೂ ನೋವುಂಟು ಮಾಡಿದೆ. ಆದರೆ, ಸತ್ಯಕ್ಕೆ ದೂರವಾದ ವಿಚಾರಗಳನ್ನು ಹೇಳಲಾಗುತ್ತಿದೆ. ಘಟನಾ ಸ್ಥಳದ ರಕ್ಷಣೆಯಾಗಿದೆ” ಎಂದರು. ಇದಕ್ಕೆ ಪೀಠವು “ನಿಮ್ಮ ಮಾತನ್ನು ನಾವು ನಂಬುತ್ತೇವೆ” ಎಂದಿತು.
“ಅಗತ್ಯವೆನಿಸಿದರೆ ಆಸ್ಪತ್ರೆಯ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಸಿಬಿಐಗೆ ಅಧಿಕಾರವಿದೆ. ಘಟನಾ ಸ್ಥಳದಲ್ಲಿನ ಹಾನಿ ಮತ್ತು ಸಂಬಂಧಿತ ಪ್ರಕರಣದ ಕುರಿತು ಪೊಲೀಸರು ಆಕ್ಷೇಪಣೆ ಸಲ್ಲಿಸಬೇಕು. ಅದನ್ನು ಅರ್ಜಿದಾರರ ವಕೀಲರಿಗೂ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಸಿಬಿಐ ತನಿಖಾ ತಂಡ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.
ಆಗಸ್ಟ್ 9ರಂದು ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ಕಿರಿಯ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಕಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿದೆ.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಸಂತ್ರಸ್ತೆಯ ಫೋಟೊ ಹಾಗೂ ಆಕೆಯ ಹೆಸರು ಮತ್ತು ಗುರುತಿನ ವಿಚಾರವನ್ನು ಆಕೆಯ ಹತ್ತಿರದವರು ಬಹಿರಂಗಪಡಿಸಬಾರದು. ಮಾಧ್ಯಮಗಳೂ ತಮ್ಮ ವರದಿಯಲ್ಲಿ ಸಂತ್ರಸ್ತೆಯ ಮಾಹಿತಿ ಪ್ರಕಟ/ಪ್ರಸಾರ ಮಾಡಬಾರದು” ಎಂದಿದೆ.
ಸ್ವಾತಂತ್ರ್ಯ ದಿನದ ಮುನ್ನಾ ದಿನ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗಲಭೆ ಮತ್ತು ಅದನ್ನು ತಡೆಯಲು ವಿಫಲವಾಗಿರುವ ಸರ್ಕಾರದ ಬಗ್ಗೆ ನ್ಯಾಯಾಲಯವು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಇಂಥ ಘಟನೆಗಳಲ್ಲಿ ಪೊಲೀಸರಿಗೆ ಗುಪ್ತಚರ ಮಾಹಿತಿ ಇರುತ್ತದೆ. ಒಂದೊಮ್ಮೆ 7,000 ಮಂದಿ ನೆರೆದಿದ್ದರೆ ಅದು ಪೊಲೀಸರಿಗೆ ತಿಳಿದಿರಲಿಲ್ಲ ಎಂಬುದನ್ನು ನಂಬಲಾಗದು. ಸಣ್ಣಪುಟ್ಟದಕ್ಕೂ ನೀವು ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡುತ್ತೀರಿ. ಇಷ್ಟು ವ್ಯಾಪಕ ಮಟ್ಟದಲ್ಲಿ ಜನರು ಸೇರಿದ್ದರೆ, ವೈದ್ಯರು ಮುಷ್ಕರ ತಾಳಿರುವಾಗ ಅದನ್ನು ಪೊಲೀಸರು ಸುತ್ತುವರಿಯಬೇಕಿತ್ತು. ಒಂದೊಮ್ಮೆ 7000 ಜನರು ಬರಬೇಕೆಂದರೆ ಅವರು ನಡೆದು ಬರಲಾಗದು. ಇದು ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಸಾಕ್ಷಿ. ವಿಷಾದಕರ ಘಟನೆ. ಇಂಥ ಸಂದರ್ಭದಲ್ಲಿ ವೈದ್ಯರು ಭೀತಿಯಿಲ್ಲದೇ ಕೆಲಸ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸುತ್ತೀರಿ?” ಎಂದು ಸಿಜೆ ಪ್ರಶ್ನಿಸಿದರು.
ಆಗ ಸರ್ಕಾರದ ವಕೀಲರು “ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದ್ದು, ಪ್ರತಿಭಟನಾ ಸ್ಥಳದಲ್ಲಿದ್ದ ಗಲಭೆಕೋರರನ್ನು ಲಭ್ಯ ವಿಡಿಯೊಗಳಿಂದ ಪತ್ತೆ ಹಚ್ಚಲಾಗುವುದು” ಎಂದರು.
ಆಗ ಪೀಠವು “ಸಾಕಷ್ಟು ಇಮೇಲ್‌ಗಳು ಬಂದಿವೆ.. ಈ ವಿಧ್ವಂಸಕತೆಯನ್ನು ತಡೆಯಲಾಗುತ್ತಿರಲಿಲ್ಲವೇ? ತುರ್ತು ಚಿಕಿತ್ಸಾ ಕೊಠಡಿಯಲ್ಲಿನ ಸೌಲಭ್ಯಗಳನ್ನು ನಾಶಪಡಿಸುವ ಹಿಂದಿನ ಕಾರಣವೇನು? ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ… ಪೊಲೀಸರಿಗೂ ಗಾಯಗಳಾಗಿವೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ನಿಭಾಯಿಸಲಾಗದ ವಿಫಲತೆಯೇ?” ಎಂದು ಕೇಳಿತು.
ಆಗ ವಕೀಲರೊಬ್ಬರು “ಇದು ರಾಜ್ಯದ ಪೊಲೀಸರ ಅಸಹಾಯಕತೆಯನ್ನು ತೋರಿಸುತ್ತದೆ. ಅದಕ್ಕಾಗಿಯೇ ಕೇಂದ್ರೀಯ ಪಡೆಗಳನ್ನು ನಿಯೋಜಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ” ಎಂದರು.