
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿನ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಕಲ್ಕತ್ತಾ ನ್ಯಾಯಾಲಯವು ಶನಿವಾರ ದೋಷಿ ಎಂದು ಘೋಷಿಸಿದೆ.
57 ದಿನ ಗೌಪ್ಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಆದೇಶ ಪ್ರಕಟಿಸಿದ್ದಾರೆ.
ನ್ಯಾಯಾಲಯವು ತೀರ್ಪು ನೀಡುತ್ತಿದ್ದಂತೆ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ರಾಯ್ ಹೇಳಿದ್ದಾನೆ. ಶಿಕ್ಷೆ ವಿಧಿಸುವುದಕ್ಕೂ ಮುನ್ನ ರಾಯ್ ವಾದ ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಜನವರಿ 20ರಂದು ನ್ಯಾಯಾಲಯವು ಶಿಕ್ಷೆ ಪ್ರಕಟಿಸಲಿದೆ.
2024ರ ಆಗಸ್ಟ್ 9ರಂದು ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯು ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
ಈ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ನಿಟ್ಟಿನಲ್ಲಿ ಕಠಿಣ ಕಾನೂನು ಮತ್ತು ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು. ಸಂತ್ರಸ್ತೆ ಸಾವನ್ನಪ್ಪಿದ ಬೆನ್ನಿಗೇ 2024ರ ಆಗಸ್ಟ್ 10ರಂದು ಸಿಟಿ ಪೊಲೀಸರ ಜೊತೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ರಾಯ್‌ನನ್ನು ಬಂಧಿಸಲಾಗಿತ್ತು.
ಈ ಮಧ್ಯೆ, ಕಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಪಶ್ಚಿಮ ಬಂಗಾಳದ ವಿಚಾರಣಾಧೀನ ನ್ಯಾಯಾಲಯವು ರಾಯ್ ವಿರುದ್ಧ ಆರೋಪ ನಿಗದಿ ಮಾಡಿತ್ತು. 2024ರ ನವೆಂಬರ್ 12ರಂದು ವಿಚಾರಣೆ ಆರಂಭವಾಗಿದ್ದು, ಜನವರಿ 9ರಂದು ವಾದ-ಪ್ರತಿವಾದ ಪೂರ್ಣಗೊಂಡಿತ್ತು. ರಾಯ್‌ಗೆ ಮರಣ ದಂಡನೆ ವಿಧಿಸುವಂತೆ ಸಿಬಿಐ ಕೋರಿದೆ.
ಸಾಕ್ಷ್ಯ ನಾಶ ಆರೋಪದ ಮೇಲೆ ಆರ್ ಜಿ ಕರ್‌ನ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್‌ನನ್ನು ಸಿಬಿಐ ಬಂಧಿಸಿತ್ತು. ನಿಗದಿತ 90 ದಿನಗಳಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಅವರಿಗೆ ಡೀಫಾಲ್ಟ್ ಜಾಮೀನು ದೊರೆತಿತ್ತು.
ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಹಣಕಾಸು ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಘೋಷ್ ಜೈಲಿನಲ್ಲೇ ಇದ್ದಾರೆ.
ಇದೆಲ್ಲರ ಮಧ್ಯೆ, ಸುಪ್ರೀಂ ಕೋರ್ಟ್ ಕೆಲಸದ ಸ್ಥಳದಲ್ಲಿ ವೈದ್ಯಕೀಯ ವೃತ್ತಿಪರರ ಸ್ವರಕ್ಷತೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ರಾಷ್ಟ್ರೀಯ ಕಾರ್ಯಪಡೆ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. 2024ರ ನವೆಂಬರ್‌ನಲ್ಲಿ ಎನ್‌ಟಿಎಫ್ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.