ನಟ ಸುಶಾಂತ್ ಗೆ ಖರೀದಿಸಿದ್ದ ಡ್ರಗ್ ಸಣ್ಣ ಪ್ರಮಾಣದ್ದು- ಜಾಮೀನು ನೀಡಬಹುದಾದ ಪ್ರಕರಣ ಎಂದಿದೆ ರಿಯಾ ಜಾಮೀನು ಅರ್ಜಿ

ಮಾದಕ ವಸ್ತು ಕಳ್ಳಸಾಗಣೆ ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿವುದಕ್ಕಾಗಿ ವಿಧಿಸಲಾಗುವ ಎನ್‌ಡಿಪಿಎಸ್ ಕಾಯ್ದೆಯ 27 ಎ ಸೆಕ್ಷನ್ ಅಡಿ ನಟಿ ರಿಯಾ ಮತ್ತು ಆತನ ಸಹೋದರನನ್ನು ಶಿಕ್ಷಿಸಲಾಗದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಿಯಾ ಚಕ್ರವರ್ತಿ ಮಾದಕ ವಸ್ತು ಪ್ರಕರಣ
ರಿಯಾ ಚಕ್ರವರ್ತಿ ಮಾದಕ ವಸ್ತು ಪ್ರಕರಣ

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಕ್ಕಾಗಿ ರೂಪಿಸಲಾದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಸೆ.11ರಂದು ತಿರಸ್ಕೃತಗೊಂಡ ಬಳಿಕ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋಯಿಕ್ ಜಾಮೀನು ಕೋರಿ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ವಕೀಲರಾದ ಆನಂದಿನಿ ಫರ್ನಾಂಡಿಸ್ ಮತ್ತು ನಮಿತಾ ಮಾನೆಶಿಂದೆ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಜಾಮೀನು ಪಡೆಯಲು 51 ಕಾರಣಗಳನ್ನು ನೀಡಲಾಗಿದೆ.

ಅರ್ಜಿಯ ಪ್ರಮುಖಾಂಶಗಳು ಹೀಗಿವೆ:

  • ರಿಯಾ ಮತ್ತು ಆಕೆಯ ಸಹೋದರನನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.

  • ರಿಯಾ ಪರಿಚಯಕ್ಕೂ ಮೊದಲೇ ನಟ ಸುಶಾಂತ್ ಸಿಂಗ್ ರಜಪೂತ್ ಮಾದಕ ವಸ್ತು ಸೇವಿಸುತ್ತಿದ್ದರು. ಸುಶಾಂತ್ ಗಾಗಿ ಖರೀದಿಸಿದ ಡ್ರಗ್ ಸಣ್ಣ ಪ್ರಮಾಣದ್ದು.

  • ಗ್ರಾಹಕರಿಗಾಗಿ “ಅಲ್ಪ ಪ್ರಮಾಣದ ಮಾದಕ ವಸ್ತು ಖರೀದಿಸಿದ್ದರೆ” ಸೆಕ್ಷನ್ 20 (ಬಿ) (ii) (ಎ) ಅಡಿ ಕೇವಲ ಒಂದು ವರ್ಷ ಸೆರೆವಾಸ ಅಥವಾ ದಂಡ ಅಥವಾ ಎರಡಕ್ಕೂ ಆರೋಪಿ ಪಾತ್ರವಾಗುತ್ತಾನೆ. ಆದ್ದರಿಂದ ಇದು ಜಾಮೀನು ನೀಡಬಹುದಾದ ಪ್ರಕರಣ.

  • ರಿಯಾ ಮತ್ತು ಆಕೆಯ ಸೋದರನ ಬಳಿ ವಾಣಿಜ್ಯ ಬಳಕೆಗೆ ಅಗತ್ಯವಾದಷ್ಟು ಮಾದಕ ವಸ್ತು ಕಂಡುಬಂದಿಲ್ಲ.

  • ಇವರಿಬ್ಬರೂ ಮಾದಕ ವ್ಯಸನಿಗಳಲ್ಲ. ರಿಯಾ ಮಾದಕ ವಸ್ತು ಖರೀದಿಸಲು ಹಣದ ಸಹಾಯ ಮಾತ್ರ ಮಾಡಿದ್ದರು.

  • ಮಾದಕ ವಸ್ತು ಕಳ್ಳಸಾಗಣೆ ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದಕ್ಕಾಗಿ ವಿಧಿಸಲಾಗುವ ಎನ್‌ಡಿಪಿಎಸ್ ಕಾಯ್ದೆಯ 27 ಎ ಸೆಕ್ಷನ್ ಅಡಿ ನಟಿ ರಿಯಾ ಮತ್ತು ಆತನ ಸಹೋದರನನ್ನು ಶಿಕ್ಷಿಸಲಾಗದು.

  • ತನಿಖಾಧಿಕಾರಿಗಳು ತಪ್ಪೊಪ್ಪಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ರಿಯಾ ವಿಚಾರಣೆ ವೇಳೆ ಮಹಿಳಾ ಅಧಿಕಾರಿ ಇರಲಿಲ್ಲ. ರಿಯಾ ಕಾನೂನು ಸಲಹೆ ಪಡೆಯಲು ಅವಕಾಶ ನೀಡಿಲ್ಲ.

  • ಇಬ್ಬರೂ ತನಿಖೆಗೆ ಸಹಕರಿಸುತ್ತಿದ್ದಾರೆ. ಅವರು ಪಲಾಯನ ಮಾಡುವುದಿಲ್ಲ.

  • ಕೋವಿಡ್ ಹಿನ್ನೆಲೆಯಲ್ಲಿ ಇವರನ್ನು ಬಂಧನದಲ್ಲಿರಿಸುವುದು ಸೂಕ್ತವಲ್ಲ.

ಅತ್ಯಾಚಾರ ಮತ್ತು ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು ತಮ್ಮ ಸುರಕ್ಷತೆ ಬಗ್ಗೆಯೂ ರಿಯಾ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ವಿಚಾರಣೆಯ ಕಾರಣಕ್ಕೆ ತಮ್ಮ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟಿಗೆ ಬುಧವಾರ ರಜೆ ಇದ್ದುದರಿಂದ ಗುರುವಾರ ವಿಚಾರಣೆ ನಡೆಯಲಿದೆ. ರಿಯಾ ಮತ್ತು ಶೋಯಿಕ್ ಪರವಾಗಿ ವಕೀಲ ಸತೀಶ್ ಮನೆಶಿಂದೆ ವಾದ ಮಂಡಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com