ಶಿಕ್ಷಣ ಹಕ್ಕಿನಡಿ ವಿದ್ಯಾಭ್ಯಾಸ ಮಾಡುವ ಇಡಬ್ಲ್ಯೂಎಸ್ ವಿದ್ಯಾರ್ಥಿಗಳು ನಯಾಪೈಸೆ ನೀಡುವಂತಿಲ್ಲ: ಮದ್ರಾಸ್ ಹೈಕೋರ್ಟ್
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯಡಿ (ಆರ್‌ಟಿಇ ಕಾಯಿದೆ) ಶಾಲೆಗೆ ದಾಖಲಾಗುವ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ (ಇಡಬ್ಲ್ಯುಎಸ್) ಮಗುವಿನ ಪುಸ್ತಕ, ಅಧ್ಯಯನ ಸಾಮಗ್ರಿ ಸೇರಿದಂತೆ ಎಲ್ಲಾ ವೆಚ್ಚಗಳನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಕೇವಲ ಮಕ್ಕಳ ಬೋಧನಾ ಶುಲ್ಕ ಮರುಪಾವತಿಸಲು ಮಾತ್ರವೇ ಕಾಯಿದೆಯಲ್ಲಿ ಅವಕಾಶವಿದೆ ಎಂದು ಹೇಳುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿ ಎಂ ದಂಡಪಾಣಿ ಅವರು ಏಪ್ರಿಲ್ 18 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ
ಸರ್ಕಾರ ಎಲ್ಲಾ ವೆಚ್ಚಗಳನ್ನು ʼಭರಿಸಲುʼ ಬದ್ಧವಾಗಿರಬೇಕು. ಕಾಯಿದೆಯಡಿ ಕಡ್ಡಾಯ ಶಿಕ್ಷಣ ಬಯಸುವ ಇಡಬ್ಲ್ಯೂಎಸ್ ವಿದ್ಯಾರ್ಥಿಗಳು ʼನಯಾಪೈಸೆಯನ್ನೂ” ಪಾವತಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿತು.
ತಾವು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಶೀಘ್ರ ನಿರ್ಧರಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಅಪ್ರಾಪ್ತರಾದ ಎಂ ಸುವೇತನ್ ಹೆಸರಿನ ವಿದ್ಯಾರ್ಥಿ ತನ್ನ ತಂದೆಯ ಮೂಲಕ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಆರ್‌ಟಿಇ ಕಾಯಿದೆಯಡಿ ಅರ್ಜಿದಾರರನ್ನು ವೆಲ್ಲೂರು ಜಿಲ್ಲೆಯ ಖಾಸಗಿ, ಅನುದಾನರಹಿತ ಮೆಟ್ರಿಕ್ಯುಲೇಷನ್ ಶಾಲೆಗೆ ಸೇರಿಸಲಾಗಿತ್ತು. ವಿದ್ಯಾರ್ಥಿಯ ಪೋಷಕರು ಮುಂದಿನ ಎರಡು ಶೈಕ್ಷಣಿಕ ವರ್ಷಗಳ ಶುಲ್ಕದ ರೂಪದಲ್ಲಿ ಸುಮಾರು ₹11,700 ಪಾವತಿಸಿದ್ದರು. ಆದರೆ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಸ್ಟೇಷನರಿ ಸೇರಿದಂತೆ ಅಧ್ಯಯನ ಸಾಮಗ್ರಿಗಳಿಗಾಗಿ ಇನ್ನೂ ₹ 11,000 ನೀಡುವಂತೆ ಶಾಲೆ ಬೇಡಿಕೆ ಇಟ್ಟಿತು
ಅರ್ಜಿದಾರರು ಹಣ ಪಾವತಿಸದೇ ಇದ್ದುದರಿಂದ ವಿದ್ಯಾರ್ಥಿ ತರಗತಿಯಲ್ಲಿ ಕುಳಿತುಕೊಳ್ಳಲು ಮಾತ್ರ ಅವಕಾಶ ನೀಡಲಾಯಿತು. ಪುಸ್ತಕ ಮತ್ತು ನೋಟ್‌ಬುಕ್ ಖರೀದಿಸಲು ಅವರಿಂದ ಸಾಧ್ಯವಾಗದ ಕಾರಣ ಅಧ್ಯಯನಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಶುಲ್ಕ ನಿರ್ಣಯ ಸಮಿತಿಯು ನಿಗದಿಪಡಿಸಿದ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸಬೇಕು ಅಥವಾ ಮರುಪಾವತಿ ಮಾಡಬೇಕು ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು. ಕಾಯಿದೆಯ ಸೆಕ್ಷನ್ 12(1)(ಸಿ) ಅಡಿಯಲ್ಲಿ, ಶೇ 25ರ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಇತರ ಶುಲ್ಕವನ್ನು ಭರಿಸಬೇಕಾಗುತ್ತದೆ. ಆದ್ದರಿಂದ, ಸಮವಸ್ತ್ರ, ನೋಟ್‌ಬುಕ್ ಮತ್ತು ಅಧ್ಯಯನ ಸಾಮಗ್ರಿಗಳಿಗೆ ಅಗತ್ಯವಾದ ಶುಲ್ಕವನ್ನು ಅರ್ಜಿದಾರರು ಪಾವತಿಸಬೇಕು ಮತ್ತು ಶುಲ್ಕ ನಿರ್ಣಯ ಸಮಿತಿಯು ನಿರ್ಧರಿಸದೇ ಇರುವ ಶುಲ್ಕ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು.
ಆದರೆ ಸರ್ಕಾರದ ವಾದ ದೋಷದಿಂದ ಕೂಡಿದ್ದು ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪುಸ್ತಕ, ಸಮವಸ್ತ್ರ, ನೋಟ್‌ಬುಕ್ ಮತ್ತಿತರ ಎಲ್ಲಾ ವಸ್ತುಗಳು ಶಿಕ್ಷಣಕ್ಕೆ ಅಗತ್ಯವಾದ ಸಾಮಗ್ರಿಗಳಾಗಿದ್ದು ಅವಿಭಾಜ್ಯವಾಗಿವೆ. ಆದ್ದರಿಂದ, ಅರ್ಜಿದಾರರು ಸೇರಿದಂತೆ ಆರ್‌ಟಿಇ ಕಾಯಿದೆಯಡಿ ಶಾಲೆಗಳಿಗೆ ದಾಖಲಾದ ರಾಜ್ಯದ ಎಲ್ಲಾ ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಪಾವತಿಸಬೇಕಾದ ಸಂಪೂರ್ಣ ಮೊತ್ತವನ್ನು ಸರ್ಕಾರ ಮರುಪಾವತಿಸಬೇಕಾಗುತ್ತದೆ ಎಂದು ಆದೇಶಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]