ಜನನ ಪ್ರಮಾಣಪತ್ರ, ಇತರೆ ದಾಖಲೆಗಳಲ್ಲಿ ತಾಯಿಯ ಹೆಸರನ್ನಷ್ಟೇ ಸೇರಿಸುವ ಹಕ್ಕು: ಮಹತ್ವದ ತೀರ್ಪು ನೀಡಿದ ಕೇರಳ ಹೈಕೋರ್ಟ್

ಅವಿವಾಹಿತ ತಾಯಿ ಅಥವಾ ಅತ್ಯಾಚಾರ ಸಂತ್ರಸ್ತೆಯ ಮಗು ಕೂಡ ನಮ್ಮ ದೇಶದ ಪ್ರಜೆಯಾಗಿದ್ದು, ಆ ಮಗುವಿನ ಮೂಲಭೂತ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂದಿದೆ ನ್ಯಾಯಾಲಯ.
mother and birth certificate
mother and birth certificate

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ಪ್ರಮಾಣಪತ್ರ ಮತ್ತಿತರ ದಾಖಲೆಗಳಲ್ಲಿ ತಾಯಿಯ ಹೆಸರನ್ನಷ್ಟೇ ಸೇರಿಸುವ ಹಕ್ಕು ಹೊಂದಿದ್ದಾನೆ ಎಂದು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. [ಎಕ್ಸ್‌ಎಕ್ಸ್‌ಎಕ್ಸ್‌ ಮತ್ತಿತರರು ಹಾಗೂ ಜನನ ಮರಣ ನೋಂದಣಾಧಿಕಾರಿ ಇನ್ನಿತರರ ನಡುವಣ ಪ್ರಕರಣ].

ಎಲ್ಲಾ ನಾಗರಿಕರನ್ನು ರಕ್ಷಿಸುವ ಕರ್ತವ್ಯ ಪ್ರಭುತ್ವದ್ದಾಗಿದ್ದು ವಿವಾಹೇತರವಾಗಿ ಮತ್ತು ಅತ್ಯಾಚಾರದಿಂದಾಗಿ ಗರ್ಭ ಧರಿಸಿದವರನ್ನು ಹಾಗೂ ಅವರ ಖಾಸಗಿತನ, ಘನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲಾಗಿದೆ ಎಂದು ನ್ಯಾ. ಪಿ ವಿ ಕುಂಞಿಕೃಷ್ಣನ್ ಅವರು ತಿಳಿಸಿದರು.

Justice PV Kunhikrishnan
Justice PV Kunhikrishnan

ತೀರ್ಪು ನೀಡುವಾಗ ನ್ಯಾಯಾಲಯ ಮಾಲಿ ಮಾಧವನ್ ನಾಯರ್ ಅವರು ಬರೆದ ಅಟ್ಟಕಥೆ ( ಕಥಕ್ಕಳಿಯಿಂದ ಕರ್ಣಶಪಥಂ ಅನ್ನು ಉಲ್ಲೇಖಿಸಿತು. ತಂದೆ ಯಾರು ಎಂದು ಗೊತ್ತಿರದೆ ಮಹಾಭಾರತದ ಕರ್ಣ ಎದುರಿಸಿದ ಮಾನಸಿಕ ಸಂಕಟ ಮತ್ತು ಅವಮಾನವನ್ನು ಆ ಕಥಾಭಾಗ ವರ್ಣಿಸುತ್ತದೆ.

Verse from Karnashapadham
Verse from Karnashapadham

ತೀರ್ಪಿನ ಪ್ರಮುಖಾಂಶಗಳು

  • ಜನನ ಪ್ರಮಾಣಪತ್ರ, ಗುರುತಿನ ಪ್ರಮಾಣಪತ್ರಗಳು ಮತ್ತಿತರ ದಾಖಲೆಗಳಲ್ಲಿ ತನ್ನ ತಾಯಿಯ ಹೆಸರನ್ನಷ್ಟೇ ಸೇರಿಸುವುದು ವ್ಯಕ್ತಿಯ ಹಕ್ಕು ಎಂಬುದು ಸ್ಪಷ್ಟ. ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾದವರ ಮತ್ತು ಅವಿವಾಹಿತ ತಾಯಂದಿರ ಮಕ್ಕಳಿದ್ದಾರೆ. ಅವರ ಖಾಸಗಿತನ, ಘನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಯಾವುದೇ ಅಧಿಕಾರಿ ಮೊಟಕುಗೊಳಿಸಲು ಸಾಧ್ಯವಿಲ್ಲ.

  • ಅಂತಹವರನ್ನು ಅವರ ಗುರುತು ಮತ್ತು ಗೌಪ್ಯತೆ ಬಹಿರಂಗಪಡಿಸದೆ ಪ್ರಭುತ್ವ ಇತರೆ ನಾಗರಿಕರಿಗೆ ಸಮನಾಗಿ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಅವರು ಊಹೆಗೂ ಮೀರಿದ ಮಾನಸಿಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ.

  • "ಅವಿವಾಹಿತ ತಾಯಿಯ ಮಗು ಕೂಡ ನಮ್ಮ ದೇಶದ ಪ್ರಜೆಯಾಗಿದ್ದು ನಮ್ಮ ಸಂವಿಧಾನದಲ್ಲಿ ಅವನು / ಅವಳಿಗೆ ಒದಗಿಸಲಾದ ಯಾವುದೇ ಮೂಲಭೂತ ಹಕ್ಕುಗಳನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ. ಆತ / ಆಕೆ ಅವಿವಾಹಿತ ತಾಯಿಗೆ ಮಾತ್ರವಷ್ಟೇ ಮಕ್ಕಳಲ್ಲ ಅವರು ಮಹಾನ್‌ ದೇಶವಾದ ಭಾರತದ ಮಕ್ಕಳು.

  • ಅಂತಹವರ ವೈಯಕ್ತಿಕ ಜೀವನದಲ್ಲಿ ಯಾರೂ ಮೂಗು ತೂರಿಸಬಾರದು. ಹಾಗೇನಾದರೂ ನಡೆದರೆ ಈ ದೇಶದ ಸಾಂವಿಧಾನಿಕ ನ್ಯಾಯಾಲಯ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಅದನ್ನು ಒದಗಿಸಲಾಗಿದೆ .

  • ಪ್ರಸ್ತುತ ಪ್ರಕರಣ ಕುರಿತಂತೆ ಸಂಬಂಧಪಟ್ಟ ಅಧಿಕಾರಿ ಮೊದಲನೇ ಅರ್ಜಿದಾರರ ಜನನ ಪ್ರಮಾಣಪತ್ರದಿಂದ ಅವರ ತಂದೆಯ ಹೆಸರನ್ನು ತೆಗೆದುಹಾಕಲು ನ್ಯಾಯಾಲಯ ನಿರ್ದೇಶನ ನೀಡುತ್ತಿದೆ. ಜೊತೆಗೆ ಅರ್ಜಿದಾರರು ಬಯಸಿದರೆ ಏಕ ಪೋಷಕಿಯಾಗಿ ತಾಯಿಯ ಹೆಸರನ್ನು ಮಾತ್ರ ಒಳಗೊಂಡ ಪ್ರಮಾಣಪತ್ರವನ್ನು ಅಧಿಕಾರಿ ನೀಡಲು ಸೂಚಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com