ಪೌರರಲ್ಲದವರಿಗೂ ಮಾಹಿತಿ ಹಕ್ಕು ಲಭ್ಯವಿದೆ, ಇದರ ನಿರಾಕರಣೆ ಸಂವಿಧಾನದ ತತ್ವಗಳಿಗೆ ವಿರುದ್ಧ: ದೆಹಲಿ ಹೈಕೋರ್ಟ್‌

ಪೌರೇತರರಿಗೆ ಒದಗಿಸಲಾಗುವ ಮಾಹಿತಿಯು ಅವರು ಕೋರಿರುವ ಮಾಹಿತಿಯ ವಿಧ ಮತ್ತು ಭಾರತದ ಸಂವಿಧಾನದ ಅಡಿ ಅಂತಹ ವರ್ಗಕ್ಕೆ ನೀಡಿರುವ ಹಕ್ಕುಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ.
Delhi High Court and RTI Act
Delhi High Court and RTI Act

ಮಾಹಿತಿ ಹಕ್ಕು ಕೇವಲ ಭಾರತೀಯ ಪೌರರಿಗೆ ಮಾತ್ರವೇ ಅಲ್ಲದೆ ಭಾರತೀಯ ಪೌರರಲ್ಲದವರಿಗೂ ಲಭ್ಯವಿದೆ ಎಂದು ದೆಹಲಿ ಹೈಕೋರ್ಟ್‌ ಸೋಮವಾರ ಹೇಳಿದೆ. ಹಾಗಾಗಿ, ಭಾರತೀಯ ನಾಗರಿಕರಲ್ಲದವರಿಗೆ ಮಾಹಿತಿ ಹಕ್ಕಿನ ನಿರಾಕರಣೆಯು ಸಂವಿಧಾನಕ್ಕೆ ಹಾಗೂ ಮಾಹಿತಿ ಹಕ್ಕಿನ ಕಾಯಿದೆಗೆ ವಿರುದ್ಧವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ [ಎ ಎಸ್ ರಾವತ್‌ ವರ್ಸಸ್‌ ದಾವಾ ತಾಷಿ].

ಪ್ರಕರಣವೊಂದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು, ಆರ್‌ಟಿಐ ಕಾಯಿದೆಯ ಸೆಕ್ಷನ್‌ 3ರ ಅಡಿ ಇರುವ "ಎಲ್ಲ ಪೌರರಿಗೆ ಮಾಹಿತಿ ಹಕ್ಕು ಲಭ್ಯವಿದೆ," ಎನ್ನುವುದನ್ನು ನಾಗರಿಕರಿಗೆ ಇರುವ ಹಕ್ಕಿನ ಸಕಾರಾತ್ಮಕ ಗುರುತಿಸುವಿಕೆ ಎಂದು ಅರ್ಥೈಸಬೇಕೆ ಹೊರತು ಪೌರೇತರರಿಗೆ ಇರುವ ನಿಷೇಧ ಎಂದಲ್ಲ ಎಂದು ಹೇಳಿದರು.

ಮುಂದುವರೆದು ನ್ಯಾಯಾಲಯವು, "ಪೌರೇತರರೆಡೆಗೆ ಅಂತಹ ಸಂಪೂರ್ಣ ನಿಷೇಧವನ್ನು ಸೃಷ್ಟಿಸುವುದು ಮಾಹಿತಿ ಹಕ್ಕು ಕಾಯಿದೆಯ ಧ್ಯೇಯೋದ್ದೇಶಗಳಿಗೆ ವ್ಯತಿರಿಕ್ತವಾದದ್ದಾಗಿದೆ, ಅಂತಹ ಸಂಪೂರ್ಣ ನಿಷೇಧವು ಮಾಹಿತಿ ಹಕ್ಕು ಕಾಯಿದೆಯೊಳಗೆ ನುಸಳಬಾರದು," ಎಂದು ಒತ್ತಿ ಹೇಳಿತು.

ಆದರೆ ಇದೇ ವೇಳೆ ಪೀಠವು, ಪೌರೇತರರಿಗೆ ಒದಗಿಸಲಾಗುವ ಮಾಹಿತಿಯು ಅವರು ಕೋರಿರುವ ಮಾಹಿತಿಯ ವಿಧ ಮತ್ತು ಭಾರತದ ಸಂವಿಧಾನದ ಅಡಿ ಅಂತಹ ವರ್ಗಕ್ಕೆ ನೀಡಿರುವ ಹಕ್ಕುಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದಿತು. "ಕೋರಲಾಗಿರುವಂತಹ ಮಾಹಿತಿಯನ್ನು (ಈ ವರ್ಗಕ್ಕೆ) ಬಹಿರಂಗಪಡಿಸುವುದು ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ," ಎಂದು ಸ್ಪಷ್ಟಪಡಿಸಿತು.

ಹಿನ್ನೆಲೆ: ಕೇಂದ್ರೀಯ ಟಿಬೆಟಿಯನ್‌ ಶಾಲಾ ಆಡಳಿತ (ಸಿಟಿಎಸ್‌ಎ) ಸಂಸ್ಥೆಯಲ್ಲಿ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯಾಗಿರುವ (ಪಿಐಒ) ಎ ಎಸ್‌ ರಾವತ್‌ ಅವರು ಕೇಂದ್ರ ಮಾಹಿತಿ ಆಯೋಗವು ತಮಗೆ ವಿಧಿಸಿದ್ದ ₹2,500 ದಂಡವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಇದಾಗಿದೆ.

ದಾವಾ ತಾಷಿ ಎನ್ನುವ ಟಿಬೆಟ್‌ ಪೌರರು ತಮಗೆ ಸಿಟಿಎಸ್‌ಎ ನೀಡಿದ್ದ ಖಾತರಿ ಪತ್ರ ಮತ್ತು ಇತರ ಸವಲತ್ತುಗಳ ಕುರಿತು ಮಾಹಿತಿಯನ್ನು ಆರ್‌ಟಿಐ ಮೂಲಕ ಕೋರಿದ್ದರು. ತಾಷಿ ಅವರು ಟಿಬೆಟ್‌ನ ಪೌರರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಮಾಹಿತಿ ನೀಡಲು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ಆಲಿಸಿದ್ದ ಸಿಐಸಿ ಮಾಹಿತಿ ನೀಡಲು ಸೂಚಿಸಿದ್ದಲ್ಲದೆ, ಅದನ್ನು ನೀಡಲು ನಿರಾಕರಿಸಿದ ಪಿಐಒ ಅಧಿಕಾರಿಯ (ರಾವತ್‌) ವರ್ತನೆ ದುರುದ್ದೇಶದಿಂದ ಕೂಡಿದೆ ಎಂದು ಹೇಳಿ ದಂಡವನ್ನು ವಿಧಿಸಿತ್ತು.

ಸಿಐಸಿ ತಮಗೆ ದಂಡ ವಿಧಿಸಿರುವುದನ್ನು ರಾವತ್ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಂತಿಮವಾಗಿ ಸಿಐಸಿಯ ಆದೇಶವನ್ನು ಭಾಗಶಃ ಎತ್ತಿ ಹಿಡಿದ ದೆಹಲಿ ಹೈಕೋರ್ಟ್‌ ಅವರಿಗೆ ವಿಧಿಸಿದ್ದ ದಂಡದ ಕುರಿತಾದ ಆದೇಶದ ಭಾಗವನ್ನು ಬದಿಗೆ ಸರಿಸಿತು. ವಿಷಯವಾರು ಅಂಶಗಳ ಸ್ವರೂಪದಲ್ಲಿ ಮಾಹಿತಿಯನ್ನು ನೀಡಲು ಸೂಚಿಸಿದ್ದ ಸಿಐಸಿ ನಿರ್ದೇಶನವನ್ನು ಎತ್ತಿಹಿಡಿಯಿತು.

ದೇಶದ ನಾಗರಿಕರಿಗೆ ವ್ಯಾಪಕವಾದ ಹಕ್ಕುಗಳನ್ನು ನೀಡಿರುವ ಸಂವಿಧಾನವು ಈ ದೇಶದ ಪೌರತ್ವ ಹೊಂದಿಲ್ಲದವರಿಗೂ ಸಣ್ಣ ಪ್ರಮಾಣದ ಹಕ್ಕುಗಳನ್ನು ನೀಡಿದೆ ಎಂದು ನ್ಯಾಯಾಲಯ ವಿವರಿಸಿತು.

Kannada Bar & Bench
kannada.barandbench.com