ಶಿಕ್ಷೆ ವಿಧಿಸಿದ ಮಾತ್ರಕ್ಕೆ ಘನತೆಯಿಂದ ಬದುಕುವ ವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ: ಕಲ್ಕತ್ತಾ ಹೈಕೋರ್ಟ್

ಜೀವಾವಧಿ ಶಿಕ್ಷೆಗೀಡಾದ ಅಪರಾಧಿಯ ಅವಧಿಪೂರ್ವ ಬಿಡುಗಡೆ ಆದೇಶ ಮರುಪರಿಶೀಲಿಸುವಂತೆ ಪಶ್ಚಿಮ ಬಂಗಾಳ ರಾಜ್ಯ ಸಜೆ ಪರಿಶೀಲನಾ ಮಂಡಳಿಗೆ ಆದೇಶಿಸುವಾಗ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೈಲು
ಜೈಲು

ಶಿಕ್ಷೆಗೊಳಗಾದ ಮಾತ್ರಕ್ಕೆ ಘನತೆಯಿಂದ ಬದುಕುವ ವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಈಚೆಗೆ ಕಲ್ಕತ್ತಾ ಹೈಕೋರ್ಟ್ ಹೇಳಿದ್ದು, ಪತಿಯ ಅವಧಿಪೂರ್ವ ಬಿಡುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮರುಪರಿಶೀಲಿಸುವಂತೆ ಪಶ್ಚಿಮ ಬಂಗಾಳ ರಾಜ್ಯ ಸಜೆ ಪರಿಶೀಲನಾ ಮಂಡಳಿಗೆ (ಡಬ್ಲ್ಯೂಬಿಎಸ್ಎಸ್ಆರ್‌ಬಿ) ಆದೇಶಿಸಿತು.

ಅರ್ಜಿದಾರೆಯ ಪತಿ ಈಗಾಗಲೇ ಎರಡು ದಶಕಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂಬ ಅಂಶವನ್ನು ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಗಮನಿಸಿದರು. 

"ಸಂವಿಧಾನದ 21ನೇ ವಿಧಿಯಡಿ ಅರ್ಜಿದಾರರ ಪತಿಗೆ ಘನತೆಯಿಂದ ಬದುಕುವ ಹಕ್ಕನ್ನು ಅವರು ಶಿಕ್ಷೆಗೊಳಗಾಗಗಿದ್ದಾರೆಂದು ಕಸಿದುಕೊಳ್ಳಲಾಗುವುದಿಲ್ಲ. ಅವರು ಸಾಕಷ್ಟು ಸಮಯವನ್ನು ಸೆರೆಮನೆಯಲ್ಲಿ ಕಳೆದಿದ್ದಾರೆ. ತನ್ನ ಪತಿಗೆ ಅರ್ಹತೆ ಇದ್ದರೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ನಿರಾಕರಿಸುವ ಮೂಲಕ ಅರ್ಜಿದಾರೆಗೆ ದ್ವಿಗುಣ ಶಿಕ್ಷೆ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಜನವರಿ 5ರಂದು ನೀಡಿರುವ ಆದೇಶದಲ್ಲಿ ತಿಳಿಸಿದೆ.  

ಸಬ್ಯಸಾಚಿ ಭಟ್ಟಾಚಾರ್ಯ
ಸಬ್ಯಸಾಚಿ ಭಟ್ಟಾಚಾರ್ಯ

ಅವಧಿಪೂರ್ವ ಬಿಡುಗಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಿತಿಯನ್ನು ಸರಿಯಾಗಿ ರಚಿಸಲಾಗಿಲ್ಲ ಹಾಗೂ ಎರಡನೆಯದಾಗಿ ಮನವಿಯನ್ನು ನಿರ್ಧರಿಸುವಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾನೂನನ್ನು ಸಮಿತಿ ಪರಿಗಣಿಸಲಿಲ್ಲ ಎಂಬ ಎರಡು ಮುಖ್ಯ ಕಾರಣಗಳಿಗಾಗಿ ಅರ್ಜಿದಾರೆ ಡಬ್ಲ್ಯೂಬಿಎಸ್ಎಸ್ಆರ್‌ಬಿ ನಿರ್ಧಾರವನ್ನು ಪ್ರಶ್ನಿಸಿದ್ದರು.

ನ್ಯಾಯಮೂರ್ತಿ ಭಟ್ಟಾಚಾರ್ಯ ಅವರು ತಮ್ಮ ಆದೇಶದಲ್ಲಿ, ಆಧುನಿಕ ಕ್ರಿಮಿನಲ್ ನ್ಯಾಯಶಾಸ್ತ್ರದಲ್ಲಿ ಶಿಕ್ಷೆಯ ಉದ್ದೇಶವು ಸುಧಾರಣೆ ತರುವುದಾಗಿದ್ದು ಪ್ರತೀಕಾರಾತ್ಮಕವಲ್ಲ. ಜೈಲಿನಲ್ಲಿದ್ದಾಗ ಅಪರಾಧಿಯ ನಡವಳಿಕೆ ಮತ್ತು ಅವನ ಪ್ರಸ್ತುತ ನಡವಳಿಕೆಯ ಬಗ್ಗೆ ಸಂಬಂಧಪಟ್ಟ ಜೈಲು ಅಧಿಕಾರಿಗಳಿಂದ ವರದಿಯನ್ನು ಕೇಳಲು ಡಬ್ಲ್ಯೂಬಿಎಸ್ಎಸ್ಆರ್‌ಬಿ ವಿಫಲವಾಗಿದೆ. ಡಬ್ಲ್ಯೂಬಿಎಸ್ಎಸ್ಆರ್‌ಬಿಯನ್ನು ಸರಿಯಾಗಿ ರಚಿಸದ ಕಾರಣ, ಅವಧಿಪೂರ್ವ ಬಿಡುಗಡೆಯ ಕೋರಿಕೆಯನ್ನು ಸೂಕ್ತ ರೀತಿಯಲ್ಲಿ ರಚಿಸಲಾದ ಮಂಡಳಿಯು ಮರುಪರಿಶೀಲಿಸುವುದು ಹೆಚ್ಚು ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಅವಲೋಕನಗಳೊಂದಿಗೆ, ಅಪರಾಧಿಯ ಅವಧಿಪೂರ್ವ ಬಿಡುಗಡೆಯ ಕೋರಿಕೆಯನ್ನು ಮರುಪರಿಶೀಲಿಸುವಂತೆ ಡಬ್ಲ್ಯೂಬಿಎಸ್ಎಸ್ಆರ್‌ಬಿಗೆ ನಿರ್ದೇಶಿಸಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು. 

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Mahuya Chakraborty vs State of West Bengal.pdf
Preview

Related Stories

No stories found.
Kannada Bar & Bench
kannada.barandbench.com