ಸಂಬಂಧ ಸಾಬೀತಿಗೆ ಇತರೆ ಸಾಕ್ಷ್ಯಗಳು ಲಭ್ಯವಿದ್ದರೆ ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಆದೇಶಿಸಬಾರದು: ಸುಪ್ರೀಂಕೋರ್ಟ್

ಇತರ ಸಾಕ್ಷ್ಯಾಧಾರಗಳು ಲಭ್ಯ ಇರುವಾಗ ಒಬ್ಬ ವ್ಯಕ್ತಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದರೆ ಆತನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂಬಂಧ ಸಾಬೀತಿಗೆ ಇತರೆ ಸಾಕ್ಷ್ಯಗಳು ಲಭ್ಯವಿದ್ದರೆ ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಆದೇಶಿಸಬಾರದು: ಸುಪ್ರೀಂಕೋರ್ಟ್
Justices Subhash Reddy and Hrishikesh Roy

ನ್ಯಾಯಾಲಯಗಳು ಯಾವುದೇ ವ್ಯಕ್ತಿಯನ್ನು ಡಿಎನ್‌ಎ ಪರೀಕ್ಷೆಗೆ ಯಾಂತ್ರಿಕವಾಗಿ ಆದೇಶಿಸಬಾರದು. ಮಹತ್ವವಿರುವ ಅರ್ಹ ಪ್ರಕರಣಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ಉಭಯ ಪಕ್ಷಕಾರರ ಹಿತಾಸಕ್ತಿಯಲ್ಲಿ ಸಮತೋಲನ ಸಾಧಿಸಿದ ನಂತರವಷ್ಟೇ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯನ್ನು ಬಳಸಬೇಕು ಹಾಗೂ ನ್ಯಾಯಯುತ ನಿರ್ಧಾರಕ್ಕಾಗಿ ಡಿಎನ್‌ಎ ಪರೀಕ್ಷೆಯ ಅಗತ್ಯವಿದೆಯೇ, ಇಲ್ಲವೇ ಎನ್ನುವುದನ್ನು ಮನಗಂಡು ಆದೇಶಿಸಬೇಕು ಎಂದು ನ್ಯಾ ಆರ್‌ ಸುಭಾಷ್‌ ರೆಡ್ಡಿ ಮತ್ತು ಹೃಷಿಕೇಷ್‌ ರಾಯ್‌ ಅವರಿದ್ದ ಪೀಠ ಹೇಳಿದೆ.

"ಇತರ ಪುರಾವೆಗಳು ಲಭ್ಯವಿರುವ ಸಂದರ್ಭಗಳಲ್ಲಿ, ಸಂಬಂಧ ಸಾಬೀತುಪಡಿಸಲು ಅಥವಾ ಪ್ರಶ್ನಿಸಲು ನ್ಯಾಯಾಲಯವು ಯಾಂತ್ರಿಕವಾಗಿ ರಕ್ತ ಪರೀಕ್ಷೆಗೆ ಆದೇಶಿಸುವುದನ್ನು ತಡೆಯಬೇಕು. ಏಕೆಂದರೆ ಇಂತಹ ಪರೀಕ್ಷೆಗಳು ವ್ಯಕ್ತಿಯ ಖಾಸಗಿತನದ ಹಕ್ಕನ್ನು ಒತ್ತರಿಸುವ ಮೂಲಕ ಪ್ರಮುಖ ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗಬಹುದು" ಎಂದು ನ್ಯಾಯಾಲಯ ವಿವರಿಸಿದೆ.

ನ್ಯಾಯಾಲಯ ಹೇಳಿದ ಪ್ರಮುಖಾಂಶಗಳು:

  • ಉಭಯ ಪಕ್ಷಕಾರರ ಹಿತವನ್ನು ಕಾಯಬೇಕಾದ ಸಂದರ್ಭದಲ್ಲಿ ಹಾಗೂ ಪರೀಕ್ಷೆಯ ಅಗತ್ಯತೆಯು ಗುರುತರವಾಗಿ ಅವಶ್ಯಕವಿರದಿದ್ದಲ್ಲಿ ಸಂಬಂಧ ಪಟ್ಟ ವ್ಯಕ್ತಿಯ ಖಾಸಗಿ ಹಕ್ಕನ್ನು ರಕ್ಷಿಸುವುದು ಅದ್ಯತೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ.

  • ಪ್ರಸ್ತುತ ಪ್ರಕರಣದಲ್ಲಿ ವಾದ ಮಂಡಿಸಲು ಸಾಕಷ್ಟು ಪುರಾವೆಗಳನ್ನು ಅರ್ಜಿದಾರರು ದಾಖಲೆಯಲ್ಲಿ ಒದಗಿಸಿದ್ದಾರೆ. ಹೀಗಿರುವಾಗ, ಅವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸುವುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ.

  • ಪಕ್ಷಕಾರರ ಹಿತದಲ್ಲಿ ಸಮತೋಲನ ಸಾಧಿಸಿದ ಬಳಿಕ ನ್ಯಾಯಯುತ ನಿರ್ಧಾರಕ್ಕಾಗಿ ಡಿಎನ್ಎ ಪರೀಕ್ಷೆ ಅಗತ್ಯವಿದೆಯೇ ಎಂಬ ವಿವೇಚನೆ ನಡೆಸಬೇಕು ಎಂದು ಭಬಾನಿ ಪ್ರಸಾದ್ ಜೆನಾ ಮತ್ತು ಒಡಿಶಾ ರಾಜ್ಯ ಮಹಿಳಾ ಆಯೋಗ ನಡುವಣ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಈಗಾಗಲೇ ಹೇಳಿದೆ.

  • ತನ್ನನ್ನು ಬೆಂಬಲಿಸುವಂತಹ ಸಾಕ್ಷ್ಯವನ್ನು ಮೇಲ್ಮನವಿದಾರರು ದಾಖಲೆಯಲ್ಲಿ ಒದಗಿಸಿದ್ದಾರೆ. ಅವರ ಪ್ರಕಾರ ಅದು ಅವರ ವಾದವನ್ನು ಸಮರ್ಪಕವಾಗಿ ಮಂಡಿಸುತ್ತದೆ. ಆ ಸಾಕ್ಷ್ಯಗಳನ್ನು ಆಧರಿಸಿ ಆತನ ಮೊಕದ್ದಮೆ ಯಶಸ್ವಿಯಾಗುತ್ತದೆ ಇಲ್ಲವೇ ಬಿದ್ದುಹೋಗುತ್ತದೆ. ಇದು ಸಹಜವಾಗಿ ಇನ್ನೊಂದು ಕಡೆಯಿಂದ ಸಾಕ್ಷ್ಯಕ್ಕೆ ಒಳಪಟ್ಟಿರುತ್ತದೆ. ತನ್ನನ್ನು ತಾನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಇದು ಆತನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗೀತನದ ಹಕ್ಕಿಗೆ ಧಕ್ಕೆ ತರುವಂತೆ ಮಾಡುತ್ತದೆ.

  • ಆದ್ದರಿಂದ, ಸಂಬಂಧವನ್ನು ಸಾಬೀತುಪಡಿಸಲು ಅಥವಾ ವಿವಾದಿಸಲು ಪುರಾವೆಗಳು ಲಭ್ಯವಿರುವ ಸಂದರ್ಭಗಳಲ್ಲಿ, ನ್ಯಾಯಾಲಯ ರಕ್ತ ಪರೀಕ್ಷೆಗೆ ಆದೇಶಿಸುವುದನ್ನು ತಡೆಯಬೇಕು ಏಕೆಂದರೆ ಅವು ಖಾಸಗಿತನದ ಹಕ್ಕಿಗೆ ಧಕ್ಕೆ ತರುತ್ತವೆ ಮತ್ತು ಪ್ರಮುಖ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಲ್ಲವು.

  • ಒಬ್ಬ ವ್ಯಕ್ತಿಯನ್ನುಅಕ್ರಮ ಸಂತಾನ ಎಂದು ಕಳಂಕಗೊಳಿಸುವಿಕೆ, ಪ್ರೌಢಾವಸ್ಥೆಯಲ್ಲಿರುವ ವ್ಯಕ್ತಿಗೆ ತಾನು ತನ್ನ ಹೆತ್ತವರ ಜೈವಿಕ ಮಗನಲ್ಲ ಎಂಬ ಮಾನಹಾನಿಕರ ಸಂಗತಿ ಖುದ್ದು ಆತನಿಗೆ ಭರಿಸಲಾಗದೇ ಹೋಗುವ ವಿಚಾರ ಮಾತ್ರವಲ್ಲದೆ ಆತನ ಖಾಸಗಿತನದ ಹಕ್ಕಿಗೆ ಕೂಡ ಧಕ್ಕೆ ತರುತ್ತದೆ.

  • ಕೆಎಸ್ ಪುಟ್ಟಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿನ ಮಹತ್ವದ ತೀರ್ಪನ್ನು ಕೂಡ ಪೀಠ ಅವಲಂಬಿಸಿತು. ಅಲ್ಲದೆ ಪ್ರಸ್ತುತ ಅರ್ಜಿದಾರರು ಸಾಕ್ಷ್ಯ ಒದಗಿಸಿದ ಬಳಿಕ ಪ್ರತಿವಾದಿಗಳು ಸಾಕ್ಷ್ಯ ನೀಡಬೇಕಾದ ವೇಳೆ ಡಿಎನ್‌ಎ ಪರೀಕ್ಷೆಗಾಗಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿತು. ಅರ್ಜಿ ಸಲ್ಲಿಸಿರುವ ಸಂದರ್ಭವನ್ನು ಪ್ರಶ್ನಿಸಿ ವಿಚಾರಣಾ ನ್ಯಾಯಾಲಯ ಪ್ರತಿವಾದಿಗಳ ಅರ್ಜಿಯನ್ನು ವಜಾಗೊಳಿಸಿದ್ದು ಇದು ಸರಿಯಾದ ಆದೇಶ ಎಂದು ನಾವು ಭಾವಿಸುತ್ತೇವೆ ಎಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಪೀಠ ಆಕ್ಷೇಪಿಸಲಾಗಿದ್ದ ತೀರ್ಪನ್ನು ತಳ್ಳಿಹಾಕಿತು.

ಘಟನೆಯ ಹಿನ್ನೆಲೆ

ಮೃತ ದಂಪತಿಯ ಆಸ್ತಿ ಮಾಲೀಕತ್ವಕ್ಕಾಗಿ ಅರ್ಜಿದಾರರು ಕೋರಿದ್ದರು. ತಾನು ಮೃತ ದಂಪತಿಯ ಮಗ ಮತ್ತು ತನಗೆ ಆಸ್ತಿಯ ಮೇಲೆ ವಿಶೇಷ ಹಕ್ಕಿದೆ ಎಂಬ ಅರ್ಜಿದಾರರ ವಾದವನ್ನು ಮೂವರು ಹೆಣ್ಣುಮಕ್ಕಳು ನಿರಾಕರಿಸಿದ್ದರು. ಹೀಗಾಗಿ ತಮ್ಮ ತಂದೆಯೊಂದಿಗಿನ ಜೈವಿಕ ಸಂಬಂಧವನ್ನು ಸಾಬೀತುಪಡಿಸಲು ಅರ್ಜಿದಾರನನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಬಳಿ ಕೋರಿದ್ದರು.

ಇದನ್ನು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದ ಅರ್ಜಿದಾರರು ತಾನು ದಂಪತಿಯ ಮಗ ಎಂದು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಮಂಡಿಸಿದ್ದರು. ವಿಚಾರಣಾ ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಲು ನಿರಾಕರಿಸಿದ್ದರಿಂದ ಪ್ರತಿವಾದಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಪ್ರತಿವಾದಿಗಳ ಪರವಾಗಿ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.