ಮತದಾನದ ಹಕ್ಕು ಮೂಲಭೂತ ಹಕ್ಕು; ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮುಖ: ಮಣಿಪುರ ಹೈಕೋರ್ಟ್‌

ಸಂಸತ್‌ ಸದಸ್ಯತ್ವ ಅಥವಾ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ಕ್ರಿಮಿನಲ್‌ ಪೂರ್ವಾಪರತೆ ಸೇರಿದಂತೆ ಹಿನ್ನೆಲೆ ತಿಳಿದುಕೊಳ್ಳುವುದು ಮತದಾರರ ಹಕ್ಕಾಗಿದ್ದು, ಇದು ಪ್ರಜಾಪ್ರಭುತ್ವದ ಉಳಿವಿಗೆ ತೀರ ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ECI
ECI

ಮತದಾನ ಮತ್ತು ಚುನಾವಣಾ ಹಕ್ಕುಗಳ ಮೇಲೆ ಮಹತ್ವದ ಪರಿಣಾಮ ಉಂಟು ಮಾಡಬಲ್ಲ ತೀರ್ಪನ್ನು ಈಚೆಗೆ ಮಣಿಪುರ ಹೈಕೋರ್ಟ್‌ ಪ್ರಕಟಿಸಿದ್ದು, ಸಂವಿಧಾನದ 19(1)(ಎ) ವಿಧಿಯಡಿ ಮತದಾನದ ಹಕ್ಕು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದಿದೆ [ಥೌನೋಜಮ್‌ ಶ್ಯಾಮ್‌ಕುಮಾರ್‌ ವರ್ಸಸ್‌ ಲೌರೆಂಬಮ್‌ ಸಂಜಯ್‌ ಸಿಂಗ್‌].

ಈಚೆಗೆ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ಎಂ ವಿ ಮುರಳೀಧರನ್‌ ಅವರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯ ಕ್ರಿಮಿನಲ್‌ ಪೂರ್ವಾಪರತೆ ತಿಳಿದುಕೊಳ್ಳಲು ಮತದಾರರಿಗೆ ಹಕ್ಕಿದೆ ಎಂದು ವಿವರಿಸುವಾಗ ಮೇಲಿನಂತೆ ಹೇಳಿದ್ದಾರೆ.

“ಸಂವಿಧಾನದ 19(1)(ಎ) ವಿಧಿಯಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಚುನಾವಣೆಯ ಪ್ರಕರಣದಲ್ಲಿ ಮತದಾರರ ಮಾತು ಅಥವಾ ಅಭಿವ್ಯಕ್ತಿಯು ಮತದಾನವನ್ನೂ ಒಳಗೊಂಡಿರುತ್ತದೆ. ಅದರರ್ಥ ಮತದಾರರು ಮತದಾನ ಮಾಡುವ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪ್ರಕಟಿಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

ಸಂಸತ್‌ ಸದಸ್ಯತ್ವ ಅಥವಾ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ಕ್ರಿಮಿನಲ್‌ ಪೂರ್ವಾಪರತೆ ಸೇರಿದಂತೆ ಹಿನ್ನೆಲೆ ತಿಳಿದುಕೊಳ್ಳುವುದು ಮತದಾರರ ಹಕ್ಕಾಗಿದ್ದು, ಇದು ಪ್ರಜಾಪ್ರಭುತ್ವದ ಉಳಿವಿಗೆ ತೀರ ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ತಾವು ಕಾನೂನು ಉಲ್ಲಂಘಿಸುವವರನ್ನು ಕಾನೂನು ರೂಪಿಸಲು ಆಯ್ಕೆ ಮಾಡುತ್ತಿದ್ದೇವೆಯೇ ಎನ್ನುವುದನ್ನು ಯೋಚಿಸಲು ಮತದಾರರಿಗೆ ಇದರಿಂದ ಸಾಧ್ಯವಾಗುತ್ತದೆ” ಎಂದು ಮಣಿಪುರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮುರಳೀಧರನ್‌ ಆದೇಶದಲ್ಲಿ ಹೇಳಿದ್ದಾರೆ.

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆಯ್ಕೆಯಾಗಿರುವ ಬಿಜೆಪಿಯ ಶಾಸಕ ಥೌನೋಜಮ್‌ ಶ್ಯಾಮ್‌ಕುಮಾರ್‌ ಅವರ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡುವ ಸಂದರ್ಭದಲ್ಲಿ ನ್ಯಾಯಾಲಯವು ಈ ವಿಚಾರ ಉಲ್ಲೇಖಿಸಿದೆ.

ಸಂವಿಧಾನ ಅಳವಡಿಸಿಕೊಂಡಿರುವ ಕಾಲದಿಂದಲೂ ಮತದಾನದ ಹಕ್ಕಿನ ಕಾನೂನು ವಿಚಾರವು ಚರ್ಚಾರ್ಹವಾಗಿದೆ. ಇಲ್ಲಿಯವರೆಗೆ ಅದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿಲ್ಲ. ಬದಲಿಗೆ ಹಲವು ತೀರ್ಪುಗಳಲ್ಲಿ ಅದನ್ನು ಕಾನೂನು/ಶಾಸನಬದ್ಧ ಹಕ್ಕನ್ನಾಗಿ ನಿರ್ಬಂಧಿಸಲಾಗಿದೆ.

ಅನೂಪ್‌ ಬರನ್ವಾಲ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಭಾಗವಾಗಿದ್ದ ನ್ಯಾ. ಅಜಯ್‌ ರಸ್ತೋಗಿ ಅವರು ಈಚೆಗೆ ಸಹಮತದ ಆದರೆ ಪ್ರತ್ಯೇಕ ತೀರ್ಪಿನಲ್ಲಿ ಮತದಾನದ ಹಕ್ಕು ಮೂಲಭೂತ ಹಕ್ಕು ಎಂದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಕ್ರಿಮಿನಲ್‌ ಮಾಹಿತಿ ಬಹಿರಂಗಗೊಳಿಸಲ್ಲ ಎಂದು ಶ್ಯಾಮ್‌ಕುಮಾರ್‌ ಅವರ ಆಯ್ಕೆಯನ್ನು ಸಮೀಪ ಸ್ಪರ್ಧಿಗಳು ಪ್ರಶ್ನಿಸಿದ್ದರು. ಶ್ಯಾಮ್‌ ಕುಮಾರ್‌ ವಿರುದ್ಧದ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಫಾರ್ಮ್‌ 26ರಲ್ಲಿ ಕೈಬಿಡಲಾಗಿದೆಯೇ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕು ಎಂದು ಹೇಳಿ ಶಾಸಕರ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.  

Kannada Bar & Bench
kannada.barandbench.com