ಷೇರು ಹಕ್ಕುಗಳ ವಿತರಣೆ ವಿವಾದ: ಯಥಾಸ್ಥಿತಿ ಕಾಪಾಡಲು ಬೈಜೂಸ್‌ಗೆ ನಿರ್ದೇಶಿಸಿದ ಹೈಕೋರ್ಟ್‌

ಬೈಜೂಸ್‌ ಮತ್ತು ಅದರ ಹೂಡಿಕೆದಾರರು ಎನ್‌ಸಿಎಲ್‌ಟಿಯು ಷೇರುಗಳ ಹಕ್ಕುಗಳ ವಿಚಾರ ನಿರ್ಧರಿಸುವವರೆಗೆ ಮಧ್ಯಂತರದ ಭಾಗವಾಗಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಒಪ್ಪಿರುವುದನ್ನು ಆಧರಿಸಿ ಸಿಜೆ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.
Karnataka High Court, Byju's
Karnataka High Court, Byju's
Published on

ಷೇರುಗಳ ವಿತರಣಾ ಹಕ್ಕಿನ ವಿಚಾರದಲ್ಲಿ ಮುಂದುವರಿಯಲು ಬೈಜೂಸ್‌ ನಿರ್ಬಂಧಿಸಬೇಕೆ ಎಂಬ ವಿಚಾರವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್‌ಟಿ) ನಿರ್ಧರಿಸುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಶುಕ್ರವಾರ ಬೈಜೂಸ್‌ಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬೈಜೂಸ್‌ ಮಾತೃಸಂಸ್ಥೆಯಾದ ಥಿಂಕ್‌ ಅಂಡ್‌ ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ ಅಸಮರ್ಪಕ ನಿರ್ವಹಣೆಗೆ ನಾಲ್ವರು ಹೂಡಿಕೆದಾರರು ಆಕ್ಷೇಪಿಸಿದ್ದಾರೆ.

ಹೂಡಿಕೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಎಸ್‌ಎಲ್‌ಟಿಯು ಜೂನ್‌ 12ರಂದು ಷೇರುಗಳ ವಿತರಣಾ ಹಕ್ಕುಗಳ ವಿಚಾರಕ್ಕೆ ವಿರಾಮ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಬೈಜೂಸ್‌ ಅಧಿಕೃತ ಬಂಡವಾಳ ಹೆಚ್ಚಿಸಿಕೊಳ್ಳುವವರೆಗೆ ಹಕ್ಕುಗಳ ವಿಚಾರದಲ್ಲಿ ಮುಂದುವರಿಯುವಂತಿಲ್ಲ ಎಂಬ ಮುಚ್ಚಳಿಕೆಯನ್ನು ಉಲ್ಲಂಘಿಸಿದೆ ಎಂಬ ಹೂಡಿಕೆದಾರರ ವಾದ ಆಲಿಸಿ ಎನ್‌ಸಿಎಲ್‌ಟಿ ಮಧ್ಯಂತರ ಆದೇಶ ಮಾಡಿತ್ತು.

ಬೈಜೂಸ್‌ ವಾದದಲ್ಲಿ ಅರ್ಹತೆ ಇದೆ ಎಂದಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಜುಲೈ 2ರಂದು ಎನ್‌ಸಿಎಲ್‌ಟಿ ಆದೇಶವನ್ನು ಬದಿಗೆ ಸರಿಸಿ, ನ್ಯಾಯಾಧಿಕರಣದ ಆದೇಶವು ಅತಾರ್ಕಿಕವಾಗಿದೆ ಎಂದಿತ್ತು. ಆದೇಶದ ಜಾರಿಗೆ ನಿರಾಕರಿಸಿದ್ದ ಏಕಸದಸ್ಯ ಪೀಠವು, ಎರಡು ವಾರಗಳಲ್ಲಿ ಹೊಸದಾಗಿ ಪ್ರಕರಣವನ್ನು ನಿರ್ಧರಿಸುವಂತೆ ಎನ್‌ಸಿಎಲ್‌ಟಿಗೆ ಆದೇಶಿಸಿತ್ತು.

Also Read
ಇಂದಿನ ಇಜಿಎಂ ನಿರ್ಧಾರ ಜಾರಿಗೆ ಹೈಕೋರ್ಟ್‌ ಮಧ್ಯಂತರ ತಡೆ: ಬೈಜೂಸ್‌ ಸಂಸ್ಥಾಪಕ ರವೀಂದ್ರನ್‌ ನಿರಾಳ

ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಹೂಡಿಕೆದಾರರು ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಷೇರು ವಿತರಣಾ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದ ವಿವಾದವನ್ನು ಎನ್‌ಸಿಎಲ್‌ಟಿಯು ಅಂತಿಮವಾಗಿ ನಿರ್ಧರಿಸುವವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ಪೀಠ ಹೇಳಿದೆ. ಏಕಸದಸ್ಯ ಪೀಠದ ಆದೇಶದ ಅನುಸಾರ ಯಾವುದೇ ಷೇರುಗಳ ಹಂಚಿಕೆ ಮಾಡಲಾಗಿದ್ದರೆ ಅದು ಎನ್‌ಸಿಎಲ್‌ಟಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಅಲ್ಲದೇ, ಜುಲೈ 31ರ ಒಳಗ ಪ್ರಕರಣವನ್ನು ನಿರ್ಧರಿಸುವಂತೆ ಎನ್‌ಸಿಎಲ್‌ಟಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶಿಸಿದೆ. 

Kannada Bar & Bench
kannada.barandbench.com