
ರಾಜ್ಯ ವಿಧಾನಸಭೆಗೆ 2013ರ ಮೇ 3ರಂದು ನಡೆದ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ರಾಬರ್ಟ್‌ಸನ್ ಪೇಟೆಯ ಗಾಂಧಿ ಸರ್ಕಲ್‌ನಲ್ಲಿ ಎರಡು ರಾಜಕೀಯ ಪಕ್ಷಗಳ ಮುಖಂಡರ ನಡುವೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ಅವರಿಗೆ ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ ವಿ ಲಕ್ಷ್ಮಿನಾರಾಯಣ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಸಚಿವ ಮುನಿಯಪ್ಪ ಮತ್ತು ಲಕ್ಷ್ಮಿನಾರಾಯಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಿದರು.
ಮುನಿಯಪ್ಪ ಅವರಿಗೆ ಐವತ್ತು ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸುವ ಷರತ್ತಿಗೆ ಒಳಪಟ್ಟು ಜಾಮೀನು ಮಂಜೂರು ಮಾಡಲಾಗಿದೆ. ಲಕ್ಷ್ಮಿನಾರಾಯಣ ಅವರಿಗೆ ಒಂದು ಲಕ್ಷ ರೂ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸುವ ಷರತ್ತಿಗೆ ಒಳಪಟ್ಟು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಆರೋಪಿಗಳು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ತಿರುಚಬಾರದು. ವಿಚಾರಣೆಯ ಎಲ್ಲಾ ದಿನದಂದು ಆರೋಪಿಗಳು ಹಾಜರಿರಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಆರೋಪಿಗಳು ದೇಶ ತೊರೆಯುವಂತಿಲ್ಲ ಮತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 19ಕ್ಕೆ ಮುಂದೂಡಿದೆ.
ಹಿನ್ನೆಲೆ: ಕೋಲಾರ ಜಿಲ್ಲೆಯ ರಾಬರ್ಟ್‌ಸನ್ ಪೇಟೆಯ ಗಾಂಧಿ ಸರ್ಕಲ್‌ನಲ್ಲಿ ಎರಡು ರಾಜಕೀಯ ಪಕ್ಷಗಳ ಮುಖಂಡರ ನಡುವೆ 2013ರ ಮೇ 3ರಂದು ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತ್ರ ನ್ಯಾಯಾಲಯಕ್ಕೆ 'ಬಿʼ ಅಂತಿಮ ವರದಿ ಸಲ್ಲಿಸಿದ್ದರು. ಆದರೆ ವರದಿಯನ್ನು ಪ್ರತಿಭಟಿಸಿ ಸಲ್ಲಿಸಲಾದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮನ್ನಿಸಿದ್ದು, ದೂರನ್ನು ವಿಚಾರಣೆಗೆ ಪರಿಗಣಿಸಿದೆ. ಹೀಗಾಗಿ, ಮುನಿಯಪ್ಪ ಮತ್ತು ಲಕ್ಷ್ಮಿನಾರಾಯಣ ಜಾಮೀನು ಕೋರಿದ್ದರು.
ಮುನಿಯಪ್ಪ ಮತ್ತು ಲಕ್ಷ್ಮಿನಾರಾಯಣ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 323, 341, 504, 506, 34 ಹಾಗೂ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್ 3 CLAUSE, (1)(ii), (x) ಅಡಿ ರಾಬರ್ಟ್‌ಸನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.