ರಸ್ತೆ ರಂಪಾಟ ಪ್ರಕರಣ: ಹುಮನಾಬಾದ್‌ಗೆ ನ್ಯಾಯಾಧೀಶೆ ಗಾಯತ್ರಿ ವರ್ಗಾವಣೆ

ಗಾಯತ್ರಿ ಅವರನ್ನು ತಕ್ಷಣದಿಂದಲೇ ಬೀದರ್ ಜಿಲ್ಲೆಯ ಹುಮನಾಬಾದ್‌ನ ಖಾಲಿ ಇರುವ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಚಂದ್ರಶೇಖರ ರೆಡ್ಡಿ ಆದೇಶಿಸಿದ್ದಾರೆ.
Judge Gayatri
Judge Gayatri
Published on

ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಗಾಯತ್ರಿ ನಡೆದುಕೊಂಡ ವರ್ತನೆಯ ವಿರುದ್ಧ ಕೇಳಿಬಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಯ ಹುಮನಾಬಾದ್‌ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಈ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಚಂದ್ರಶೇಖರ ರೆಡ್ಡಿ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದು, ಗಾಯತ್ರಿ ಅವರನ್ನು ತಕ್ಷಣದಿಂದಲೇ ಬೀದರ್ ಜಿಲ್ಲೆಯ ಹುಮನಾಬಾದ್‌ನ ಖಾಲಿ ಇರುವ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆದೇಶಿಸಿದ್ದಾರೆ. 

ಗಾಯತ್ರಿ ಅವರು ಮಾಲೂರಿನಲ್ಲಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ಬಂದ ಯುವಕ ಕೆ ಎಂ ವಿನಯ್‌ ಜೊತೆ ದರ್ಪದಿಂದ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದಡಿ ವಿಚಾರಣೆ ನಡೆಸಬೇಕು ಎಂದು ಬೆಂಗಳೂರು ವಕೀಲರ ಸಂಘ ಕೋಲಾರ ಜಿಲ್ಲೆಯ ಉಸ್ತುವಾರಿ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರಿಗೆ ಮನವಿ ಮಾಡಿತ್ತು. 

ಇದೇ ವೇಳೆ ಗಾಯತ್ರಿ ಅವರು ಕೆ ಎಂ ವಿನಯ್‌ ಅವರ ತಾಯಿ ವಿ ಕವಿತಾ ಮತ್ತು ವಿನಯ್ ಅವರ ಅಜ್ಜ ಪಿ ವೆಂಕಟೇಶ್‌ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ರದ್ದುಕೋರಿದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಗಾಯತ್ರಿ ಅವರಿಗೆ ಛೀಮಾರಿ ಹಾಕಿತ್ತು. ಅಂತೆಯೇ, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತರುವಂತೆ ಆದೇಶಿಸಿತ್ತು.

Kannada Bar & Bench
kannada.barandbench.com