ಬೆನ್ನಿಗಾನಹಳ್ಳಿ–ಚಿಕ್ಕಬಾಣಾವರ ಮಾರ್ಗ ಮಧ್ಯದಲ್ಲಿನ ನಿಲ್ದಾಣಗಳ ನಿರ್ಮಾಣಕ್ಕಾಗಿ ಉಪನಗರ ರೈಲ್ವೆ (ಬಿಎಸ್‌ಆರ್‌ಪಿ) ಕಾರಿಡಾರ್-2ರ ಯೋಜನೆಯಡಿ 699 ಮರಗಳನ್ನು ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ್ದ ಅನುಮತಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ. ಜುಲೈ 12ರವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಆದೇಶಿಸಿದೆ.
ಮರಗಳನ್ನು ಕಡಿಯುವುದಕ್ಕೆ ಕೆ-ರೈಡ್‌ಗೆ ನೀಡಲಾಗಿದ್ದ ಅನುಮತಿಯನ್ನು ಪ್ರಶ್ನಿಸಿ ಪರಿಸರವಾದಿ ದತ್ತಾತ್ರೇಯ ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಸ್ತೆ ಅಗಲೀಕರಣ ಮಾಡಲು ಬಿಬಿಎಂಪಿಯ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯೂ ಆಗಿರುವ ಮರ ಅಧಿಕಾರಿಯು 699 ಮರ ಕಡಿಯಲು ಮೇ 29ರಂದು ಅನುಮತಿಸಿದ್ದರು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಬಿಬಿಎಂಪಿಗೆ ಆದೇಶಿಸಿದೆ.
“ಕನ್ನಡ ಮಾತನಾಡುವ ಯಾವುದೇ ಪ್ರಜೆ ಮರ ಕಡಿಯಲು ಒಪ್ಪುವುದಿಲ್ಲ. ನನಗೆ ಕನ್ನಡ ಮಾತನಾಡಲು ಬರದೇ ಇದ್ದರೂ ಮರ ಕಡಿಯುವುದಕ್ಕೆ ನನ್ನ ಸಹಮತವಿಲ್ಲ. ಇದನ್ನು ನಾವು ಪರಿಶೀಲಿಸುತ್ತೇವೆ. ಅಗತ್ಯವಿಲ್ಲದ ಹೊರತು ಅನಗತ್ಯವಾಗಿ ಮರಗಳನ್ನು ಏಕೆ ಕಡಿಯಲಾಗುತ್ತಿದೆ? ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಪರಿಹಾರದಲ್ಲಿ ಮಾರ್ಪಾಡು ಮಾಡಲಾಗುವುದು” ಎಂದು ಸಿಜೆ ಹೇಳಿದರು. ಅಂತಿಮವಾಗಿ ಪೀಠವು ಅರ್ಜಿ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.