ಬಳ್ಳಾರಿ ರಸ್ತೆ ಅಗಲೀಕರಣ: ಮರಗಳ ಸ್ಥಳಾಂತರ, ತೆರವಿನ ಬಗ್ಗೆ ಬಿಬಿಎಂಪಿಯಿಂದ ಹೈಕೋರ್ಟ್‌ಗೆ ಅಫಿಡವಿಟ್‌

ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
BBMP and Karnataka HC
BBMP and Karnataka HC
Published on

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಅಗಲೀಕರಣಕ್ಕಾಗಿ ಎರಡು ಮರಗಳನ್ನು ಸ್ಥಳಾಂತರ ಮಾಡಿದ್ದು, 53 ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಮಾಹಿತಿ ನೀಡಿದೆ.

ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದರು. ಈ ಅಂಶ ದಾಖಲಿಸಿಕೊಂಡ ಪೀಠವು ವಿಚಾರಣೆ ಮುಂದೂಡಿತು.

ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 1,260 ಮೀಟರ್ ಉದ್ದವಿರುವ ಈ ಮಾರ್ಗ ಮೇಖ್ರಿ ವೃತ್ತದಿಂದ ಆರು ಪಥಗಳ ರಸ್ತೆಯಾಗಿದ್ದು, ಗಾಯಿತ್ರಿ ವಿಹಾರ್ ಬಳಿ ಸಣ್ಣದಾಗಿ ಕೇವಲ ಎರಡು ಪಥಗಳದ್ದಾಗಿದೆ. ಅರಮನೆ ಮೈದಾನದ ದ್ವಾರ ಸಂಖ್ಯೆ ನಾಲ್ಕರಿಂದ ಕಾವೇರಿ ಚಿತ್ರಮಂದಿರದವರೆಗೂ ಕೇವಲ ಎರಡು ಪಥಗಳಾಗಿವೆ. ಈ ಭಾಗದ ಉದ್ದ 630 ಮೀಟರ್‌ಗಳಾಗಿದ್ದು, ಅಗಲ 3 ರಿಂದ 3.5 ಮೀಟರ್‌ನಷ್ಟಿದೆ. ಇದೀಗ ರಸ್ತೆ ಅಗಲೀಕರಣ ಮಾಡುತ್ತಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಅಗಲ 7.5 ರಿಂದ 9.5ಕ್ಕೆ ಹೆಚ್ಚಳವಾಗಲಿದೆ. ಇದರಿಂದಾಗಿ ಈವರೆಗೂ ಎರಡೂ ಮಾರ್ಗಗಳಲ್ಲಿ ಕೇವಲ ಎರಡು ಪಥಗಳಿರುವ ರಸ್ತೆ ಮೂರು ಪಥಗಳಾಗಿ ಬದಲಾಗಲಿದೆ ಎಂದು ಬಿಬಿಎಂಪಿಯ ಪೂರ್ವ ವಿಭಾಗದ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್ ಎಸ್ ಪ್ರಿಯದರ್ಶಿನಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

Also Read
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆ ಅಗಲೀಕರಣ: ಅಫಿಡವಿಟ್‌ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

ರಸ್ತೆ ಅಗಲೀಕರಣಕ್ಕಾಗಿ ಮರ ತೆರವು ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಅರ್ಜಿ ಕಳುಹಿಸಲಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿಯು 2022ರ ಡಿಸೆಂಬರ್ 12ರಂದು ಮರಗಳ ತೆರವು ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡಿದ್ದಾರೆ. ಹೀಗಾಗಿ, ಎರಡು ಮರಗಳನ್ನು ಸ್ಥಳಾಂತರ ಮಾಡಿದ್ದು, ಇನ್ನುಳಿದ 53 ಮರಗಳನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಮೇಖ್ರಿ ವೃತ್ತದಿಂದ ಜಯಮಹಲ್ ಮಾರ್ಗದ ರಸ್ತೆಯ ಅಗಲೀಕರಣಕ್ಕೆ ಕಾಮಗಾರಿ ಪ್ರಾರಂಭವಾಗಬೇಕಿದ್ದು, ಈ ಸಂಬಂಧ ಮತ್ತೊಂದು ಅಫಿಡವಿಟ್‌ ಸಲ್ಲಿಸಲಾಗುವುದು. ಹೈಕೋರ್ಟ್ ನೀಡುವ ಎಲ್ಲ ಆದೇಶಗಳನ್ನು ಬಿಬಿಎಂಪಿ ತಪ್ಪದೆ ಪಾಲಿಸಲಿದೆ ಎಂದು ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com