ಐಪಿಎಸ್‌ ಅಧಿಕಾರಿ ರೂಪ ಹಾಗೂ ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ರೋಹಿಣಿ; ನಾಳೆ ಆದೇಶ

ಐಎಎಸ್‌ ಅಧಿಕಾರಿ ರೋಹಿಣಿ ಇತರೆ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾದ ಅವರ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಐಪಿಎಸ್‌ ಅಧಿಕಾರಿ ರೂಪ ಪ್ರಕಟಿಸಿದ್ದಲ್ಲದೇ ಅವರ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದರು.
IAS Rohini Sindhuri and IPS Roopa Moudgil
IAS Rohini Sindhuri and IPS Roopa Moudgil

ತಮ್ಮ ವಿರುದ್ಧ ಮಾನಹಾನಿಕಾರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ವಿರುದ್ಧ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೂಡಿರುವ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಗುರುವಾರಕ್ಕೆ ಆದೇಶ ಕಾಯ್ದಿರಿಸಿದೆ.

ರೋಹಿಣಿ ಸಿಂಧೂರಿ ಅವರು ವಕೀಲ ಚನ್ನಬಸಪ್ಪ ಎಸ್‌ ಎನ್‌ ಅವರ ಮೂಲಕ ಮಾಧ್ಯಮಗಳು ಹಾಗೂ ರೂಪ ಮೌದ್ಗಿಲ್‌ ಸೇರಿದಂತೆ 60 ಮಂದಿಯ ವಿರುದ್ಧ ಆರ್ಡರ್‌ 7, ನಿಯಮ 1 ಜೊತೆಗೆ ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್‌ 26ರ ಅಡಿ ಹೂಡಿರುವ ದಾವೆಯ ವಿಚಾರಣೆಯನ್ನು 73ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕೆ ಎಸ್‌ ಗಂಗಣ್ಣವರ್‌ ವಿಚಾರಣೆ ನಡೆಸಿದರು.

ಸೈಬರ್‌ ವಿಭಾಗದ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ರೂಪಾ ಅವರು ರೋಹಿಣಿ ಅವರ ಮೊಬೈಲ್‌ನಲ್ಲಿನ ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ರೋಹಿಣಿ ಪರ ವಕೀಲರು ವಾದಿಸಿದರು.

ಇದಕ್ಕೆ ನ್ಯಾಯಾಲಯವು ಸೂಕ್ತ ಪ್ರಾಧಿಕಾರದಲ್ಲಿ ರೂಪಾ ಅವರ ವಿರುದ್ಧ ದೂರು ನೀಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು. ಆಗ ವಕೀಲರು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ ಎಂದು ವಿವರಿಸಿದ್ದಾರೆ.

ರೋಹಿಣಿ ಅವರ ಖಾಸಗಿ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ರೂಪಾ ಪ್ರಕಟಿಸಿದ್ದಾರೆ. ರೋಹಿಣಿ ಅವರ ಖಾಸಗಿ ಮೊಬೈಲ್‌ ನಂಬರ್‌ ಅನ್ನು ಬಹಿರಂಗಪಡಿಸಿದ್ದಾರೆ. ಇದರಿಂದ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ರೂಪಾ ವೈಯಕ್ತಿಕ ತೇಜೋವಧೆಗೆ ಇಳಿದಿದ್ದು, ಕಾನೂನು ಚೌಕಟ್ಟು ಮೀರಿ ಹೇಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿಯೂ ದೂರು ದಾಖಲಿಸಲಾಗಿದೆ ಎಂದು ವಾದಿಸಿದರು.

ರೋಹಿಣಿ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ಫೆಬ್ರವರಿ 23ಕ್ಕೆ ಆದೇಶ ಕಾಯ್ದಿರಿಸಿದೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಕೆಲ ಐಎಎಸ್‌ ಅಧಿಕಾರಿಗಳಿಗೆ ಅವರ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಆ ಚಿತ್ರಗಳನ್ನು ಐಪಿಎಸ್‌ ಅಧಿಕಾರಿ ರೂಪ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಲ್ಲದೇ ಅವರ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದರು. ಆನಂತರ ರೋಹಿಣಿ ಮತ್ತು ರೂಪಾ ಅವರ ನಡುವೆ ಸಾರ್ವಜನಿಕ ಕೆಸರೆರಚಾಟ ಆರಂಭವಾಗಿತ್ತು. ಇದು ಸರ್ಕಾರಕ್ಕೆ ಮುಜುಗರದ ಸನ್ನಿವೇಶ ನಿರ್ಮಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ರೋಹಿಣಿ, ರೂಪಾ ಹಾಗೂ ಅವರ ಪತಿ ಮನೀಶ್‌ ಮೌದ್ಗಿಲ್‌ ಅವರನ್ನು ವರ್ಗಾವಣೆ ಮಾಡಿತ್ತು. ರೋಹಿಣಿ ಮತ್ತು ರೂಪಾ ಅವರಿಗೆ ಹುದ್ದೆ ತೋರಿಸಿಲ್ಲ.

Related Stories

No stories found.
Kannada Bar & Bench
kannada.barandbench.com