ರೋಹಿತ್‌ ವೇಮುಲಾ ಆತ್ಮಹತ್ಯೆ ಖಂಡಿಸಿ ಪ್ರತಿಭಟಿಸಿದ್ದ 15 ವಿದ್ಯಾರ್ಥಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಒಂದೇ ಸ್ಥಳದಲ್ಲಿ ಸಭೆ, ಪ್ರತಿಭಟನೆ ಅಥವಾ ಸಾರ್ವಜನಿಕ ಭಾಷಣ ನಡೆಸುವ ಉದ್ದೇಶದಿಂದ 250ಕ್ಕಿಂತ ಅಧಿಕ ಜನರು ಸೇರುವುದಾದರೆ ಮಾತ್ರ ಪೂರ್ವಾನುಮತಿ ಅಗತ್ಯ ಎಂದು ಹೇಳಿರುವ ನ್ಯಾಯಾಲಯ.
High Court of Karnataka
High Court of Karnataka
Published on: 

ಆಂಧ್ರಪ್ರದೇಶ ವಿದ್ಯಾರ್ಥಿ ರೋಹಿತ್‌ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೊಯಿಲಾ ಗ್ರಾಮದ ಮೊಹಮ್ಮದ್‌ ತುಫೈಲ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice H P Sandesh
Justice H P Sandesh

ಭಾರತೀಯ ದಂಡ ಸಂಹಿತೆಯಲ್ಲಿ ಉಲ್ಲೇಖಿಸಿರುವಂತೆ ಆರೋಪಿಗಳು ಅಕ್ರಮ ಸಭೆ ನಡೆಸಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಯಾವುದೇ ಸಭೆಯಲ್ಲಿ ವ್ಯಕ್ತಿಯೊಬ್ಬರು ಹಾಜರಿದ್ದ ಮಾತ್ರಕ್ಕೆ ಅವರನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 149ರ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಆ ಸಭೆಯ ಸದಸ್ಯರು ಸಾಮಾನ್ಯ ಅಪರಾಧ ಉದ್ದೇಶ ಹೊಂದಿದ್ದರು ಮತ್ತು ಆರೋಪಿಯೂ ಅದೇ ಉದ್ದೇಶದಿಂದ ಕಾರ್ಯನಿರ್ವಹಿಸಿದ್ದ ಎಂಬುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸುವುದ ಅಗತ್ಯ ಎಂದು ಪೀಠ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಸಭೆಗಳು ಮತ್ತು ಸಾರ್ವಜನಿಕ ಮೆರವಣಿಗೆಗಳ ಪರವಾನಗಿ ಹಾಗೂ ನಿಯಂತ್ರಣ ಆದೇಶ-2009 ಅನ್ನು ಪರಾಮರ್ಶಿಸಿರುವ ಪೀಠವು ಒಂದೇ ಸ್ಥಳದಲ್ಲಿ ಸಭೆ, ಪ್ರತಿಭಟನೆ ಅಥವಾ ಸಾರ್ವಜನಿಕ ಭಾಷಣ ನಡೆಸುವ ಉದ್ದೇಶದಿಂದ 250ಕ್ಕಿಂತ ಅಧಿಕ ಜನರು ಸೇರುವುದಾದರೆ ಮಾತ್ರ ಪೂರ್ವಾನುಮತಿ ಅಗತ್ಯ ಎಂದು ವಿವರಿಸಿದೆ.

ಜಾತಿ ತಾರತಮ್ಯದ ಆರೋಪದಿಂದ ಮನನೊಂದು ರೋಹಿತ್‌ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಪೂರ್ವಾನುಮತಿ ಪಡೆಯದೆ ಗುಂಪು ಸೇರಿ ಘೋಷಣೆ ಕೂಗಿರುವ ವಿದ್ಯಾರ್ಥಿಗಳು ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಆರೋ‍ಪಿಸಿ ಕಬ್ಬನ್‌ ಪಾರ್ಕ್‌ ಪೊಲೀಸರು 15 ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 283, 341, 143 ಮತ್ತು 144ರ ಜೊತೆಗೆ ಸೆಕ್ಷನ್‌ 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 2016ರ ಜುಲೈ 20ರಂದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಅರ್ಜಿದಾರರ ಪರವಾಗಿ ವಕೀಲ ಮೊಹಮ್ಮದ್‌ ತಾಹೀರ್‌ ವಾದಿಸಿದ್ದರು.

Attachment
PDF
Mohammad Tufail K v State
Preview
Kannada Bar & Bench
kannada.barandbench.com