ಕೊಲೆ ಪ್ರಕರಣ: ಪತ್ರಕರ್ತ ಮೆಹಬೂಬ್‌ ಸುಬಾನಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಅರ್ಜಿದಾರರು ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಇಷ್ಟೇ ಮೊತ್ತಕ್ಕೆ ಒಬ್ಬರ ಖಾತ್ರಿ ನೀಡಬೇಕು ಎಂದು ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ. 
High Court of Karnataka
High Court of Karnataka

ಆಂಜನೇಯ ಎಂಬುವರ ಕೊಲೆ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಪತ್ರಕರ್ತ ಮೆಹಬೂಬ್‌ ಸುಬಾನಿ ಬಿನ್‌ ಅಬ್ದುಲ್‌ ಅಜೀಜ್‌ ಮುನವಳ್ಳಿ ಅವರಿಗೆ ಕರ್ನಾಟಕ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮೆಹಬೂಬ್‌ ಸುಬಾನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ ಜೆ ಶಿವಶಂಕರೇಗೌಡ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮೆಹಬೂಬ್‌ ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು ಅರ್ಜಿದಾರರು ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ರಾಮನಾಥ್‌ ಗೋಯಂಕಾ ಪ್ರಶಸ್ತಿ ಪುರಸ್ಕೃತರು. ಅವರೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ಆರೋಪಿಗಳನ್ನು ಪೊಲೀಸರ ಮುಂದೆ ಹಾಜರು ಪಡಿಸಿರುತ್ತಾರೆ. ಸಾಕ್ಷ್ಯ ನಾಶಪಡಿಸುವ ಯಾವುದೇ ಉದ್ದೇಶ ಹೊಂದಿರುವುದಿಲ್ಲ ಮತ್ತು ಪೊಲೀಸರಿಂದ ತಲೆ ತಪ್ಪಿಸಿಕೊಳ್ಳಲು ನೆರವಾಗುವಂತೆ ಯಾವುದೇ ಆರೋಪಿಗೆ ಆಶ್ರಯ ಕೊಟ್ಟಿರುವುದಿಲ್ಲ ಎಂದು ವಿವರಿಸಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರು ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಇಷ್ಟೇ ಮೊತ್ತಕ್ಕೆ ಒಬ್ಬರ ಖಾತ್ರಿ ನೀಡಬೇಕು ಎಂದು ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ: ಆಂಜನೇಯನ ಕೊಲೆ ಹಾಗೂ ಆತನ ಸ್ನೇಹಿತ ಮಧು ಕೊಲೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2023ರ ಮಾರ್ಚ್‌ 15ರಂದು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಆರು ಆರೋಪಿಗಳು ಮೆಹಬೂಬ್ ಸುಬಾನಿ ಅವರನ್ನು ಸಂಪರ್ಕಿಸಿ ಕೊಲೆಯ ಬಗ್ಗೆ ತಿಳಿಸಿದ್ದರು. ಆಗ ಅವರಲ್ಲಿ ಕೊಲೆಯ ಕೃತ್ಯವೆಸಗಿದ ನಾಲ್ಕು ಜನರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದ ಮೆಹಬೂಬ್‌ ಸುಬಾನಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಮುಂದೆ ಅವರನ್ನೆಲ್ಲಾ ಹಾಜರುಪಡಿಸಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದಿದ್ದ ತನಿಖಾಧಿಕಾರಿಯು ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಿದ್ದೂ ಮೆಹಬೂಬ್‌ ಸುಬಾನಿ ಇವರನ್ನೆಲ್ಲಾ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸದೇ ಸಾಕ್ಷ್ಯ ನಾಶಪಡಿಸಿರುತ್ತಾರೆ ಎಂದು ಆರೋಪಿಸಿ ಅವರನ್ನು 8ನೇ ಆರೋಪಿ ಎಂದು ಗುರುತಿಸಿದ್ದರು. ನಂತರ 2023ರ ಮಾರ್ಚ್‌ 16ರಂದು ಅವರ ಮನೆಯಿಂದ ದಸ್ತಗಿರಿ ಮಾಡಲಾಗಿತ್ತು.

ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಿಲ್ಲ, ಕೊಲೆ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ, ಸಾಕ್ಷಿ ನಾಪತ್ತೆಯಾಗುವಂತೆ ಮಾಡಿದ್ದಾರೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್‌ 120 (ಬಿ), 201, 212ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದಾವಣಗೆರೆ ಸತ್ರ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು.

Related Stories

No stories found.
Kannada Bar & Bench
kannada.barandbench.com