

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಖಾಸಗಿ ದೂರಿನ ಸಂಜ್ಞೆ ಪರಿಗಣಿಸಿರುವ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶನಿವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಸಂದೀಪ್ ಪಾಟೀಲ್ ಅವರು ಎರಡನೇ ಆರೋಪಿಯನ್ನಾಗಿಸಲಾಗಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧದ ಪ್ರಕ್ರಿಯೆ ಕೈಬಿಟ್ಟಿದ್ದಾರೆ.
“ಪ್ರಿಯಾಂಕ್ ಖರ್ಗೆ ಮತ್ತು ನಲಪಾಡ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 356ರ ಅಡಿ ದಂಡನೀಯ ಅಪರಾಧಕ್ಕೆ ಸಂಜ್ಞೆ ಪರಿಗಣಿಸಲಾಗಿದೆ. ದಿನೇಶ್ ಗುಂಡೂರಾವ್ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ಕಚೇರಿಯು ಕ್ರಿಮಿನಲ್ ಪ್ರಕರಣ ದಾಖಲಿಸಿ, ಪ್ರಿಯಾಂಕ್ ಮತ್ತು ನಲಪಾಡ್‌ಗೆ ಸಮನ್ಸ್ ಜಾರಿಗೊಳಿಸಬೇಕು” ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದೆ.
04.10.2025ರಂದು ಪ್ರಿಯಾಂಕ್ ಖರ್ಗೆ ಅವರು “ಆರ್‌ಎಸ್‌ಎಸ್‌ನವರು ಸರ್ಕಾರಿ ಜಾಗಗಳು ಮತ್ತು ಶಾಲಾ ಆವರಣದಲ್ಲಿ ಯಾವುದೇ ರೀತಿಯ ಸಮಾರಂಭ ಮತ್ತು ಚಟುವಟಿಕೆಗಳನ್ನು ಮಾಡದಂತೆ ನಿಷೇಧಿಸಬೇಕು. ಅವರು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದು, ದೇಶಕ್ಕೆ ಮಾರಕವಾಗಿದ್ದಾರೆ. ಯುವಕರನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ” ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
14.10.2025ರಂದು “ನಿಮ್ಮ ಮನೆಯಲ್ಲಿ ನಿಮ್ಮ ಅಣ್ಣ, ತಮ್ಮಂದಿರು, ಗೆಳೆಯರು, ಬಂಧು-ಬಳಗದವರು ಯಾರಾದರೂ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರೊಂದಿಗಿನ ಸಂಬಂಧ ಕಡಿತ ಮಾಡಿ” ಎಂದು ಪೋಸ್ಟ್ ಮಾಡಿದ್ದರು ಎಂದು ವಿವರಿಸಲಾಗಿದೆ.
ಇದಾದ ಎರಡು ದಿನಗಳ ಬಳಿಕ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು ಎಕ್ಸ್‌ನಲ್ಲಿ “ಗೌರಿ ಲಂಕೇಶ್, ಪಾನ್ಸರೆ ಮತ್ತು ಎಂ ಎಂ ಕಲಬುರ್ಗಿ ಅವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದ್ದಾರೆ. ಅವರೇ ನೇರ ಹೊಣೆಗಾರರಾಗಿದ್ದು, ತಾಲಿಬಾನ್ ಸಂಸ್ಕೃತಿಯವರಾಗಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು ಎಂದು ಆಕ್ಷೇಪಿಸಲಾಗಿದೆ.
ಇನ್ನು, ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರು “ಆರ್‌ಎಸ್‌ಎಸ್‌ನವರ ಚಡ್ಡಿಯಲ್ಲಿ ತಾಕತ್ತು ಇಲ್ಲ” ಎಂದಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಆರ್‌ಎಸ್‌ಎಸ್ ಮಾನಹಾನಿ ಮಾಡಲಾಗಿದ್ದು, ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಖಾಸಗಿ ದೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಬೆಂಗಳೂರಿನ ಎ ತೇಜಸ್ ದೂರಿದ್ದರು. ಇದನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿದೆ.