ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ತಡೆ

“ರಾಜಕೀಯೇತರ ಸಂಸ್ಥೆಯೊಂದು ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಗುರುರಾಜ್‌ ಭಾಗವಹಿಸಿದ್ದು, ಅವರ ನಡೆಯು ನಡತಾ ನಿಯಮಗಳು 2021ರ ನಿಯಮ 5 ಅನ್ನು ಉಲ್ಲಂಘಿಸಿಲ್ಲ” ಎಂದಿರುವ ಕೆಎಸ್‌ಎಟಿ.
ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ತಡೆ
Published on

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದ ಮೇಲೆ ಯಾದಗಿರಿ ಜಿಲ್ಲೆಯ ಹುಣಸಗಿ  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹ ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ್ದ ಶಿಕ್ಷಣ ಇಲಾಖೆಯ ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ ಈಚೆಗೆ ತಡೆ ನೀಡಿದೆ.

ನ್ಯಾಯಾಂಗ ಸದಸ್ಯರಾದ ಎಸ್‌ ವೈ ವಟವಟಿ ಮತ್ತು ಆಡಳಿತಾತ್ಮಕ ಸದಸ್ಯೆ ಡಾ. ಅಮಿತಾ ಪ್ರಸಾದ್‌ ಅವರ ಪೀಠವು ಶಿಕ್ಷಕ ಗುರುರಾಜ್‌ ಅವರು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.

ನಿಯಮದ ಪ್ರಕಾರ ಶಿಕ್ಷಕರು ರಾಜಕೀಯ ಪಕ್ಷದ ಕಾರ್ಯಕ್ರಮ ಅಥವಾ ರಾಜಕೀಯ ಸಂಬಂಧ ಹೊಂದಿರುವ ಸಂಸ್ಥೆಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಶಿಕ್ಷಕ ಗುರುರಾಜ್‌ ಅವರು ರಾಜ್ಯ ಸರ್ಕಾರದ ಆದೇಶ ಅಥವಾ ಅಧಿಸೂಚನೆಯನ್ನು ಉಲ್ಲಂಘಿಸಿಲ್ಲ. ಆರ್‌ಎಸ್‌ಎಸ್‌ ರಾಜಕೀಯೇತರ ಸಂಸ್ಥೆಯಾಗಿದೆ ಎಂದು ಕೆಎಸ್‌ಎಟಿ ಹೇಳಿದೆ.

“ರಾಜಕೀಯೇತರ ಸಂಸ್ಥೆಯೊಂದು ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಗುರುರಾಜ್‌ ಭಾಗವಹಿಸಿದ್ದು, ಅವರ ನಡೆಯು ನಡತಾ ನಿಯಮಗಳು 2021ರ ನಿಯಮ 5 ಅನ್ನು ಉಲ್ಲಂಘಿಸಿಲ್ಲ. ಇಂಥ ಕಾರ್ಯಕ್ರಮದಲ್ಲಿ ಸರ್ಕಾರ ಅಧಿಕಾರಿ ಭಾಗವಹಿಸಬಾರದು ಎಂದು ರಾಜ್ಯ ಸರ್ಕಾರ ಯಾವುದೇ ಆದೇಶ ಅಥವಾ ಅಧಿಸೂಚನೆ ಹೊರಡಿಸಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುರಾಜ್‌ ಅವರು ಸಹ ಶಿಕ್ಷಕರಾಗಿದ್ದು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಗುರುರಾಜ್‌ ಅವರನ್ನು ಆರ್‌ಎಸ್‌ಎಸ್‌ ಕಾರ್ಯಕ್ರಮ ಮತ್ತು ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕೆ ಅಮಾನತು ಮಾಡಿದ್ದರು.

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಗುರುರಾಜ್‌ ನಿರಾಕರಿಸಿರಲಿಲ್ಲ. ಆದರೆ, ರಾಜಕೀಯೇತರ ಸಂಸ್ಥೆಯೊಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬುದಕ್ಕೆ ನಿರ್ಬಂಧವಿಲ್ಲ ಎಂದು ವಾದಿಸಿದ್ದರು.

ಅಮಾನತು ಆದೇಶದಲ್ಲಿ ನಿಯಮ 7 ಅನ್ನು ಉಲ್ಲೇಖಿಸಿದ್ದು, ಅದನ್ನು 1968ರ ಏಪ್ರಿಲ್‌ 25 ನಡತಾ ನಿಯಮಗಳಿಂದ ಕೈಬಿಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗುರುರಾಜ್‌ ಅವರನ್ನು ವಕೀಲ ಎಂ ಎಂ ಸಂಗೋಂಡ್‌ ಪ್ರತಿನಿಸಿದ್ದರು. ಶಿಕ್ಷಣ ಇಲಾಖೆಯ ಪರವಾಗಿ ಹೆಚ್ಚುವರಿ ಸರ್ಕಾರಿ ವಕೀಲ ವೀರನಗೌಡ ಎಂ ಬಿರಾದಾರ್‌ ವಾದಿಸಿದ್ದರು.

Attachment
PDF
Gururaj Vs State of Karnataka
Preview
Kannada Bar & Bench
kannada.barandbench.com