

ಕಲಬುರ್ಗಿಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥ ಸಂಚಲನ ನಡೆಸಲು ಅನುಮತಿ ಕೋರಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ (ಆರ್‌ಎಸ್‌ಎಸ್) ಸೇರಿದಂತೆ ಸಭೆ/ಸಮಾರಂಭ ಮತ್ತು ಪ್ರತಿಭಟನೆಗೆ ಅನುಮತಿ ಕೋರಿರುವ ಎಲ್ಲಾ ಸಂಘಟನೆಗಳ ಜೊತೆ ಅಕ್ಟೋಬರ್ 28ರಂದು ಶಾಂತಿಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಅಂತೆಯೇ, ಶಾಂತಿ ಸಭೆಯ ನಿರ್ಣಯವನ್ನು ಅಕ್ಟೋಬರ್ 30ಕ್ಕೆ ನ್ಯಾಯಾಲಯಕ್ಕೆ ತಿಳಿಸುವಂತೆ ಆದೇಶಿಸಿದೆ.
ಚಿತ್ತಾಪುರದಲ್ಲಿ ಅಕ್ಟೋಬರ್ 19ರಂದು ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಶೀಲ್ದಾರ್ ಕ್ರಮಕ್ಕೆ ಆಕ್ಷೇಪಿಸಿ ಆರ್‌ಎಸ್‌ಎಸ್ ಕಲಬುರ್ಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಆರ್‌ಎಸ್‌ಎಸ್ ನವೆಂಬರ್ 2ರಂದು ಪಥಸಂಚಲನ ನಡೆಸಲು ಉದ್ದೇಶಿಸಿರುವ ಚಿತ್ತಾಪುರದಲ್ಲಿ ಉದ್ವಿಗ್ನ ಸ್ಥಿತಿ ಇದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ವರದಿಯನ್ನು ಪರಿಗಣಿಸಿ ನ್ಯಾಯಾಲಯವು ಈ ಆದೇಶ ಮಾಡಿದೆ.
"ಅಕ್ಟೋಬರ್ 19ರಂದು ಈ ನ್ಯಾಯಾಲಯವು ವಾಸ್ತವ ಸ್ಥಿತಿಗತಿ ಮತ್ತು ಅರ್ಜಿದಾರರು ಸಲ್ಲಿಸಿರುವ ಮನವಿಯಯನ್ನು ಪರಿಗಣಿಸುವಂತೆ ನಿರ್ದೇಶಿಸಿತ್ತು. ಇದಕ್ಕೆ ಅನುಗುಣವಾಗಿ ಸರ್ಕಾರವು ವರದಿ ಸಲ್ಲಿಸಿದೆ. ಸಭೆ/ಪ್ರತಿಭಟನೆ ನಡೆಸಲು ಸಂಬಂಧಿತ ಪ್ರಾಧಿಕಾರವು ಸಂಘಟನೆಗಳ ಜೊತೆ ಶಾಂತಿಸಭೆ ನಡೆಸಿ, ನಿರ್ಧರಿಸಲಿದೆ. ಅಕ್ಟೋಬರ್ 19ರಿಂದ ಇಲ್ಲಿಯವರೆಗೆ ಚಿತ್ತಾಪುರ ನಗರದಲ್ಲಿ ಒಂದು ರೀತಿಯ ಉದ್ವಿಗ್ನ ಸ್ಥಿತಿಗತಿ ಇದೆ. ಮಾಧ್ಯಮಗಳಲ್ಲಿ ಹಲವು ಸಂಘಟನೆಗಳು ಪಥಸಂಚಲನದ ಪರ ಮತ್ತು ವಿರೋಧದ ಹೇಳಿಕೆ ನೀಡುತ್ತಿದ್ದು, ಅನುಮತಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸ್ಥಳೀಯಾಡಳಿತವು ಶಾಂತಿಸಭೆ ನಡೆಸಲು ನಿರ್ಧರಿಸಿದೆ. ಈ ಸಂಬಂಧಿತ ವರದಿ ಮತ್ತು ವಾದವನ್ನು ಪರಿಗಣಿಸಿ, ಪ್ರತಿವಾದಿ ಸ್ಥಳೀಯಾಡಳಿತವು ಅಕ್ಟೋಬರ್ 28ರಂದು ಶಾಂತಿಸಭೆ ನಡೆಸಬೇಕು. ಆನಂತರ ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದು” ಎಂದು ನ್ಯಾಯಾಲಯ ಆದೇಶಿಸಿದೆ.
ಆನಂತರ ಪೀಠವು ಜಿಲ್ಲಾ ಕೇಂದ್ರದಲ್ಲಿ ಶಾಂತಿಸಭೆ ನಡೆಸುವಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿತು. ಇದಕ್ಕೆ ಎಜಿ ಅವರು “ಇಂದು ಸಂಜೆ ಅಥವಾ ನಾಳೆಯೊಳಗೆ ಎಲ್ಲಿ ಶಾಂತಿಸಭೆ ನಡೆಸಲಾಗುತ್ತದೆ ಎಂಬುದನ್ನು ತಿಳಿಸಲಾಗುವುದು” ಎಂದರು. ಇದಕ್ಕೆ ಪೀಠವು “ಇದನ್ನು ಎಳೆಯಬೇಡಿ, ಹಿಂದಿನ ನಿರ್ಣಯವು ಎಲ್ಲರೂ ಮತ್ತು ಸಮಾಜಕ್ಕೆ ಸರಿಯಾಗಿತ್ತು” ಎಂದಿತು.
ಇದಕ್ಕೆ ಅಡ್ವೊಕೇಟ್ ಜನರಲ್ ಅವರು “ರಾಜ್ಯ ಸರ್ಕಾರ ಇದನ್ನು ಎಳೆಯುವುದಿಲ್ಲ. ಆದರೆ, ಅರ್ಜಿದಾರರು ಸಹಕರಿಸಬೇಕು” ಎಂದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಅರ್ಜಿದಾರರು ಸಹಕರಿಸುತ್ತಿಲ್ಲ ಎಂಬುದು ಇಲ್ಲಿ ವಿಚಾರವಲ್ಲ” ಎಂದರು. ಇದಕ್ಕೆ ಪೀಠವು “ಎಲ್ಲಾ ಪಕ್ಷಕಾರರು ಸಹಕರಿಸಬೇಕು” ಎಂದಿತು.
ಇದಕ್ಕೂ ಮುನ್ನ, ಅರುಣ್ ಶ್ಯಾಮ್ ಅವರು “ಅಕ್ಟೋಬರ್ 19ರಂದು ನ್ಯಾಯಾಲಯ ನಿರ್ದೇಶಿಸಿರುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದರು.
ಇದಕ್ಕೆ ಪೀಠವು “ಸರ್ಕಾರ ಏನು ನಿರ್ಣಯ ಕೈಗೊಂಡಿದೆ” ಎಂದಿತು. ಅದಕ್ಕೆ ಎಜಿ ಅವರು “ಜಿಲ್ಲಾಧಿಕಾರಿಯು ವಾಸ್ತವಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ವರದಿ ನೀಡಿದ್ದು, ಅದರಲ್ಲಿ ಎರಡು ವಿಚಾರಗಳಿವೆ” ಎಂದರು.
ಆಗ ನ್ಯಾಯಾಲಯವು “ವರದಿಯನ್ನು ಅರ್ಜಿದಾರರಿಗೆ ಹಂಚಲಾಗಿದೆಯೇ” ಎಂದು ಕೇಳಿತು. ಇದಕ್ಕೆ ಎಜಿ ಅವರು “ತಾನು ಈಗಷ್ಟೇ ವರದಿಯನ್ನು ಪಡೆದಿದ್ದೇನೆ. ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಬಾಕಿ ಇಡಲಾಗಿದೆ. ಅದನ್ನು ತಿರಸ್ಕರಿಸಲಾಗಿಲ್ಲ. ಹಲವು ಸಂಘಟನೆಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಇದೆ” ಎಂದರು.
ಇದಕ್ಕೆ ಪೀಠವು “ಯಾವಾಗ ಅರ್ಜಿಯ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದಿತು. ಆಗ ಎಜಿ ಅವರು “ಹತ್ತು ದಿನ ಕಾಲಾವಕಾಶ ನೀಡಿದರೆ ಪರಿಸ್ಥಿತಿ ತಿಳಿಯಲಾಗಿದೆ” ಎಂದರು. ಇದಕ್ಕೆ ಪೀಠವು “ಸಭೆ ನಡೆಸಲು ಸಂಘಟನೆಗಳಿಗೆ ಆಹ್ವಾನ ನೀಡಿದ್ದೀರಾ?” ಎಂದಿತು. ಇದಕ್ಕೆ ಎಜಿ ಅವರು “ಸಮಸ್ಯೆ ಪರಿಹರಿಸುವುದು ಉದ್ದೇಶವಾಗಿದ್ದು, ಎಲ್ಲಾ ಸಂಸ್ಥೆಗಳು ಈ ಕೆಲಸದಲ್ಲಿ ನಿರತವಾಗಿವೆ” ಎಂದರು. ಅದಕ್ಕೆ ಪೀಠವು “ಎಲ್ಲರನ್ನೂ ಒಳಗೊಳ್ಳಲು ಇದೊಂದು ಅವಕಾಶ” ಎಂದರು. ಆಗ ಎಜಿ ಅವರು “ಈ ಕಾರಣಕ್ಕಾಗಿಯೇ ಎರಡು ವಾರಗಳ ಬಳಿಕ ವಿಚಾರಣೆ ನಡೆಸುವಂತೆ ಕೋರಲಾಗುತ್ತಿದೆ” ಎಂದರು.
ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಆಕ್ಷೇಪಿಸಿದರು. ಆಗ ಪೀಠವು “ನಾವು ಇದೆಲ್ಲವನ್ನೂ ಪರಿಹರಿಸಲು ದಾರಿ ಕಂಡುಕೊಳಳಬೇಕಿದೆ. ಮುಂದಿನ ದಾರಿಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವರದಿಯು ಸ್ಪಷ್ಟವಾಗಿಲ್ಲ” ಎಂದಿತು.
ಇದಕ್ಕೆ ಎಜಿ ಅವರು “ಪರಿಸ್ಥಿತಿಗೆ ಖಂಡಿತವಾಗಿಯೂ ಪರಿಹಾರ ಹುಡುಕಲಾಗುವುದು. ಇದಕ್ಕಾಗಿ ಎರಡು ವಾರ ನೀಡಬೇಕು. ಶಾಂತಿ ಕಾಪಾಡಲು ಎಲ್ಲಾ ಪ್ರಯತ್ನ ಮಾಡಲಾಗುವುದು” ಎಂದರು.
ಇದಕ್ಕೆ ಅರುಣ್ ಶ್ಯಾಮ್ ಅವರು “ಇದೊಂದು ಬಹುಮುಖ್ಯವಾದ ಪ್ರಕರಣವಾಗಿದ್ದು, ಭಾನುವಾರ ನಡೆದ ವಿಶೇಷ ವಿಚಾರಣೆಯಂದು ನವೆಂಬರ್ ೨ಕ್ಕೆ ಪಥಸಂಚಲನ ನಡೆಸಲು ಒಪ್ಪಲಾಗಿದೆ. ಸರ್ಕಾರವೇ ಸಮಸ್ಯೆ ಸೃಷ್ಟಿಸುತ್ತಿದೆ. ಪಥಸಂಚಲನ ತಡೆಯಲು ಇತರೆ ಸಂಘಟನೆಗಳು ರ್ಯಾಲಿ ನಡೆಸುತ್ತಿವೆ. ಸರ್ಕಾರ ಒಪ್ಪಿದ ಬಳಿಕ ಪಥಸಂಚಲನದ ಹಾದಿಯ ಗುರುತು ನೀಡಲಾಗಿದೆ. ಅದೇ ದಿನ ಪ್ರತಿಭಟನೆ ನಡೆಸಬೇಕು ಎಂದು ಹತ್ತು ಸಂಘಟನೆಗಳು ಬಂದಿವೆ. ನಾವು ಪಥಸಂಚಲನ ನಡೆಸುತ್ತೇವೆ, ಅವರು ಸೂಕ್ತ ರಕ್ಷಣೆ ನೀಡಬೇಕು. ಇತರೆ ಸಂಘಟನೆಗಳು ಬೇರೊಂದು ದಿನ ಪ್ರತಿಭಟನೆ ನಡೆಸಲಿ” ಎಂದರು.
ಇದಕ್ಕೆ ಎಜಿ ಅವರನ್ನು ಕುರಿತು ಪೀಠವು “ನಿಮ್ಮ ವರದಿಯಲ್ಲಿ ಬೇರೆ ಸಂಘಟನೆಗಳು ಅನುಮತಿ ಕೋರಿರುವುದರ ಕುರಿತು ಏನೂ ಇಲ್ಲ” ಎಂದರು. ಅದಕ್ಕೆ ಎಜಿ ಅವರು “ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇರುವುದರಿಂದ ಈ ಸಂದರ್ಭದಲ್ಲಿ ಮೆರವಣಿಗೆ ನಡೆಸುವುದು ಸರಿಯಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ವರದಿ ಹೇಳುತ್ತದೆ” ಎಂದರು.
ಆಗ ಅರುಣ್ ಶ್ಯಾಮ್ ಅವರು “ರಾಜ್ಯ ಸರ್ಕಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಕೇಂದ್ರ ಪಡೆಯನ್ನು ನಿಯೋಜಿಸಬಹುದು” ಎಂದರು. ಈ ವೇಳೆ ಎಜಿ ಅವರು “ಇದೇ ಸಮಸ್ಯೆ” ಎಂದರು. ಅದಕ್ಕೆ ಅರುಣ್ ಶ್ಯಾಮ್ ಅವರು “ಪಥಸಂಚಲನ ನಡೆಸುವುದು ನಮ್ಮ ಮೂಲಭೂತ ಹಕ್ಕು” ಎಂದರು. ಆಗ ಎಜಿ ಅವರು “ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿಲ್ಲ. ಅದು ಬಾಕಿ ಇದೆ” ಎಂದರು.
ಆಗ ಎಜಿ ಅವರನ್ನು ಕುರಿತು ಪೀಠವು “ಸಂಘಟಕರು ಮತ್ತು ಇತರರ ಜೊತೆ ಮಾತುಕತೆ ನಡೆಸಲಾಗುವುದು ಎಂದು ನಿಮ್ಮ ವರದಿ ಹೇಳುತ್ತದೆ. ಯಾವಾಗ ಮಾತುಕತೆ ನಡೆಸುತ್ತೀರಿ?” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಎಜಿ “ಅಕ್ಟೋಬರ್ 17ರಂದು ಮನವಿ ನೀಡಲಾಗಿದ್ದು, ಸಂಬಂಧಿತ ಪ್ರಾಧಿಕಾರಗಳು ಎಲ್ಲಾ ಪ್ರಯತ್ನ ಮಾಡುತ್ತಿವೆ” ಎಂದರು.
ಇದಕ್ಕೆ ಪೀಠವು “ಅದು ನಮಗೆ ಗೊತ್ತಿದೆ. ಹೇಗೆ ಎಲ್ಲರನ್ನೂ ಒಳಗೊಳ್ಳಬಹುದು ಎನ್ನುವುದನ್ನು ನಿರೂಪಿಸಲು ನಿಮಗೆ ಇದೊಂದು ಅವಕಾಶವಾಗಿದೆ. ನಿಮ್ಮ ಆಡಳಿತ ಸಾಮರ್ಥ್ಯದ ಮೂಲಕ ಇದನ್ನು ಪರಿಹರಿಸಬಲ್ಲಿರಿ ಎನ್ನುವ ನಂಬಿಕೆ ಇದೆ. ಅಕ್ಟೋಬರ್ 28ಕ್ಕೆ ಶಾಂತಿಸಭೆ ನಡೆಸಿ” ಎಂದಿತು.