ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಬಿಹಾರ ಮತ್ತು ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಎಂ ರಾಮಾ ಜೋಯಿಸ್ ಮಂಗಳವಾರ ಬೆಳಿಗ್ಗೆ ನಿಧನರಾದರು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 90 ವರ್ಷ ವಯಸ್ಸಾಗಿತ್ತು. 1931ರಲ್ಲಿ ಶಿವಮೊಗ್ಗ ಜಿಲ್ಲೆಯ ಅರಗ ಗ್ರಾಮದಲ್ಲಿ ಜನಿಸಿದ್ದ ಜೋಯಿಸ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು 1959ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು.
1977ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವರು 1992ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. ನಂತರ ಜಾರ್ಖಂಡ್ ಮತ್ತು ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಸುಪ್ರೀಂಕೋರ್ಟ್ ವಕೀಲರಾಗಿಯೂ ಅವರು ಹಲವು ಕಾಲ ದುಡಿದಿದ್ದರು.
ʼಸರ್ವೀಸ್ ಅಂಡರ್ ದ ಸ್ಟೇಟ್ʼ, ʼಹಿಸ್ಟಾರಿಕಲ್ ಬ್ಯಾಟಲ್ʼ, ʼನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್ʼ, ʼರಾಜಧರ್ಮ ವಿತ್ ದ ಲೆಸೆನ್ಸ್ ಆಫ್ ರಾಜನೀತಿʼ ರೀತಿಯ ಕಾನೂನು ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಬರೆದಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ನಡೆಯಲಿದ್ದು ರಾಜಾಜೀನಗರದ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.