ಕಡ್ಡಾಯ ಶಿಕ್ಷಣ ಹಕ್ಕು: ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ ವರದಿ ಅಧ್ಯಯನಕ್ಕೆ ಸಮಯ ಕೋರಿದ ಅಮಿಕಸ್; ಹೈಕೋರ್ಟ್‌ ಅಸ್ತು

ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ಅಂತರ ಇಲಾಖೆಯ ಸಮನ್ವಯ ಸಮಿತಿ ಸಭೆ ಅತ್ಯುತ್ತಮವಾಗಿತ್ತು. ಈ ನಿಟ್ಟಿನಲ್ಲಿ ಕೆಲವು ನಿರ್ದೇಶನಗಳನ್ನು ನೀಡಬೇಕಿದೆ ಎಂದು ಪೀಠದ ಗಮನಸೆಳೆದ ಕಾತ್ಯಾಯಿನಿ ಚಾಮರಾಜ್.‌
Karnataka HC and RTE Act

Karnataka HC and RTE Act

ಬೆಂಗಳೂರಿನಲ್ಲಿ ಶಾಲೆ ತೊರೆದಿರುವ 6-14 ವಯೋಮಾನದ ಮಕ್ಕಳ ಕುರಿತು ಬಿಬಿಎಂಪಿಯು ಮನೆಮನೆ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ವರದಿ ಸಲ್ಲಿಸಿದೆ. ನಗರಾಭಿವೃದ್ಧಿ ಇಲಾಖೆಯು ವರದಿ ನೀಡಿದ್ದು, ಅವುಗಳನ್ನು ಅಧ್ಯಯನ ಮಾಡಿ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಅಗತ್ಯವಿದೆ ಎಂದು ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರ ಕೋರಿಕೆಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಸೋಮವಾರ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಫಣೀಂದ್ರ ಅವರು ಬಿಬಿಎಂಪಿ ಹಾಗೂ ನಗಾರಭಿವೃದ್ಧಿ ಇಲಾಖೆಗಳು ಅಗತ್ಯ ಮಾಹಿತಿ ನೀಡಿವೆ. ಅದನ್ನು ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ವಿವರಿಸಲು ಕಾಲಾವಕಾಶದ ಅಗತ್ಯವಿದೆ ಎಂದರು.

Also Read
ಕಡ್ಡಾಯ ಶಿಕ್ಷಣ ಹಕ್ಕು: ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ಕೋರಿಕೆ

ಪಾರ್ಟಿ ಇನ್‌ ಪರ್ಸನ್‌ ಆದ ಕಾತ್ಯಾಯಿನಿ ಚಾಮರಾಚ್‌ ಅವರು ಮಾರ್ಚ್‌ 16ರಂದು ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ಅಂತರ ಇಲಾಖೆಯ ಸಮನ್ವಯ ಸಮಿತಿ ಸಭೆ ಅತ್ಯುತ್ತಮವಾಗಿತ್ತು. ಈ ನಿಟ್ಟಿನಲ್ಲಿ ಕೆಲವು ನಿರ್ದೇಶನಗಳನ್ನು ನೀಡಬೇಕಿದೆ” ಎಂದು ವಾದ ಮಂಡಿಸಲು ಮುಂದಾದರು.

ಆಗ ಪೀಠವು ಅಮಿಕಸ್‌ ಕ್ಯೂರಿ ಅವರು ತಮಗೆ ದೊರೆತಿರುವ ದಾಖಲೆಗಳ ಅಧ್ಯಯನಕ್ಕೆ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಇಂದು ವಿಚಾರಣೆ ನಡೆಸುವುದಿಲ್ಲ. ಮುಂದಿನ ವಿಚಾರಣೆಯಲ್ಲಿ ನಿಮ್ಮ ವಾದ ಆಲಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com