ಆರ್‌ಟಿಇ ಅಂಶಗಳು ವಸತಿ ಶಾಲೆಗಳಿಗೂ ಅನ್ವಯ: ಕರ್ನಾಟಕ ಹೈಕೋರ್ಟ್‌

ಆರ್‌ಟಿಇ ಕಾಯಿದೆಯಲ್ಲಿನ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ₹1.61 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಶಾಲೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
Justice Suraj Govindraj
Justice Suraj Govindraj
Published on

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರ (ಆರ್‌ಟಿಐ) ಅಂಶಗಳು ವಸತಿ ಶಾಲೆಗಳಿಗೂ ಅನ್ವಯವಾಗುತ್ತವೆ ಎಂದು ಕರ್ನಾಟಕ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಮೈಸೂರಿನ ಜ್ಞಾನ ಸರೋವರ ಎಜುಕೇಷನ್‌ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.

ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಐಸಿಎಸ್‌ಇ ಪಠ್ಯಕ್ರಮದ ಶಾಲೆ ನಡೆಸುತ್ತಿರುವ ಜ್ಞಾನ ಸರೋವರ ಎಜುಕೇಷನ್‌ ಟ್ರಸ್ಟ್‌; ಆರ್‌ಟಿಇ ಕಾಯಿದೆಯಲ್ಲಿನ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ₹1.61 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಶಾಲೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಆರ್‌ಟಿಇ ಕಾಯಿದೆಯ ಅಧಿಸೂಚನೆಯನ್ನು 2012ರ ಏಪ್ರಿಲ್‌ 28ರಂದು ಹೊರಡಿಸಲಾಗಿದೆ. ಇದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದರೆ ಪಡೆದಿಲ್ಲ. ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ, ಇಲಾಖೆ ವಿಧಿಸಿರುವ ದಂಡದ ಕ್ರಮ ಸರಿಯಾಗಿಯೇ ಇದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಶಾಲೆ ಆರ್‌ಟಿಇ ಅಡಿ ಮಾನ್ಯತೆ ಪಡೆದಿಲ್ಲ. ಹೀಗಾಗಿ, ಅದರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಕೋರಿ ಡಿ ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್‌ ಎಂಬುವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಇದನ್ನು ಆಧರಿಸಿ ಇಲಾಖೆಯು ಶಾಲೆಯ ಮುಖ್ಯಸ್ಥರಿಗೆ ನೋಟಿಸ್‌ ನೀಡಿತ್ತು. ಆದರೆ, ಶಾಲಾ ಆಡಳಿತ ಮಂಡಳಿ ಪರ ಯಾರೂ ಹಾಜರಾಗಿರಲಿಲ್ಲ. ತದನಂತರ 2017ರ ಜನವರಿ 12ರಂದು ಶಿಕ್ಷಣ ಇಲಾಖೆ ಮತ್ತೊಂದು ಷೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಇದಕ್ಕೆ ಶಾಲೆಯ ಆಡಳಿತ ಮಂಡಳಿ “ನಮ್ಮದು ವಸತಿ ಶಾಲೆ. ವಸತಿ ಶಾಲೆ ಆರ್‌ಟಿಇ ಕಾಯಿದೆಯ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂದು ಉತ್ತರಿಸಿತ್ತು. ಇದಕ್ಕೆ ಪ್ರತಿಯಾಗಿ ಇಲಾಖೆಯು ಶಾಲೆ ಆರ್‌ಟಿಇ ಕಾಯಿದೆ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್‌ ಮೆಟ್ಟಿಲೇರಿ‌ತ್ತು.

Attachment
PDF
Jnana Sarovar Educational Trust Vs State of Karnataka.pdf
Preview
Kannada Bar & Bench
kannada.barandbench.com