ಬ್ಯಾಂಕ್ ಸುಸ್ತಿದಾರರ ಮಾಹಿತಿ ಬಹಿರಂಗಪಡಿಸಲು ಸೂಚಿಸುವ 2015ರ ತೀರ್ಪಿನಿಂದ ಗೌಪ್ಯತಾ ಹಕ್ಕಿನ ಮೇಲೆ ಪರಿಣಾಮ: ಸುಪ್ರೀಂ

ವೈಯಕ್ತಿಕ ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಬಹಿರಂಗಪಡಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲು ಆರ್‌ಬಿಐಗೆ ಅಧಿಕಾರವಿದೆ, ಆದರೆ ಇದರಿಂದ ಗ್ರಾಹಕರ ಗೌಪ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದ ನ್ಯಾಯಾಲಯ.
Justices BR Gavai and CT Ravikumar
Justices BR Gavai and CT Ravikumar
Published on

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಸಾಲ ಪಡೆದ ಉದ್ಯಮಿಗಳು ಟಾಪ್‌ 100 ಸುಸ್ತಿದಾರರ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಹಂಚಿಕೊಳ್ಳಲು ಆರ್‌ಬಿಐಗೆ ನಿರ್ದೇಶಿಸಿ ತಾನು 2015ರಲ್ಲಿ ನೀಡಿದ್ದ ತೀರ್ಪು ಮಾಹಿತಿ ಹಕ್ಕು ಮತ್ತು ಗೌಪ್ಯತೆಯ ಹಕ್ಕುಗಳನ್ನು ಸಮತೋಲನದಿಂದ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ [ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ.

ಆರ್‌ಬಿಐ ಮತ್ತು ಜಯಂತಿಲಾಲ್ ಎನ್ ಮಿಸ್ತ್ರಿ ನಡುವಣ ಪ್ರಕರಣದಲ್ಲಿ ವೈಯಕ್ತಿಕ ಗ್ರಾಹಕರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಬಹಿರಂಗಪಡಿಸಲು ಬ್ಯಾಂಕ್‌ಗಳಿಗೆ ನಿರ್ದೇಶನಗಳನ್ನು ನೀಡುವುದಕ್ಕೆ ಆರ್‌ಬಿಐ ಅರ್ಹ ಎಂದು ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪು ಗ್ರಾಹಕರ ಗೌಪ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿದೆ.

"ಇದು ವ್ಯಕ್ತಿಗಳ ಖಾಸಗಿತನದ ಮೂಲಭೂತ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು… ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸದೆ, ಮೇಲ್ನೋಟಕ್ಕೆ, ಜಯಂತಿಲಾಲ್ ಎನ್ ಮಿಸ್ತ್ರಿ ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿರುವ ತೀರ್ಪು ಮಾಹಿತಿ ಹಕ್ಕು ಮತ್ತು ಖಾಸಗಿತನದ ಹಕ್ಕನ್ನು ಸಮತೋಲನಗೊಳಿಸುವ ಅಂಶವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ನ್ಯಾಯಾಲಯ ವಿವರಿಸಿದೆ.

ಮಾಹಿತಿ ಬಹಿರಂಗಕ್ಕೆ ನಿರ್ದೇಶಿಸುವ ಆರ್‌ಬಿಐ ನಡೆ ಪ್ರಶ್ನಿಸಿ ಖಾಸಗಿ ಬ್ಯಾಂಕ್‌ಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಯನ್ನು ಪರಿಗಣಿಸಬಾರದು ಎಂದು ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಬ್ಯಾಂಕ್‌ ಹಗರಣಗಳು ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ನಂಬಿಕೆ ಕುಸಿಯುವಂತೆ ಮಾಡಿವೆ: ಸುಪ್ರೀಂ ಮೆಟ್ಟಿಲೇರಿದ ಸ್ವಾಮಿ

ಎರಡೂ ಹಕ್ಕುಗಳು ಮೂಲಭೂತವಾದವುಗಳಾಗಿರುವುದರಿಂದ ಅವುಗಳನ್ನು ಸಮತೋಲನಗೊಳಿಸಬೇಕಾಗಿದೆ ಎಂದು ತೀರ್ಪು ವಿವರಿಸಿದ್ದು ಹಿಂದಿನ ತೀರ್ಪು ತಪ್ಪಾದ ಕಾನೂನಿಗೆ ಬುನಾದಿ ಹಾಕಿದ್ದರೆ ಅದನ್ನು ವಿಸ್ತೃತ ಪೀಠ ಮರುಪರಿಶೀಲಿಸಬಹುದು ಎಂದು ತಿಳಿಸಿದೆ.

ಗ್ರಾಹಕರ ಗೌಪ್ಯತೆಯನ್ನು ರಕ್ಷಿಸಲು ಮತ್ತು ಅದರ ಪರಿಣಾಮವಾಗಿ ಮಾಹಿತಿ ಬಹಿರಂಗಪಡಿಸುವಿಕೆಯ ಮಾನದಂಡಗಳನ್ನು ಪ್ರಶ್ನಿಸಲು ಬ್ಯಾಂಕ್‌ಗಳು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಕಾನೂನಿನ ಪ್ರಕಾರ ಸೂಕ್ತ ಎಂದು ಪೀಠ ಹೇಳಿದೆ.

Kannada Bar & Bench
kannada.barandbench.com