ರೈಲ್ವೆಯ ವೈಟಿಂಗ್‌ ಲಿಸ್ಟ್‌ ಮರುಪಾವತಿ ನಿಯಮ ನ್ಯಾಯಸಮ್ಮತವಲ್ಲ; ಪ್ರಯಾಣಿಕರಿಗೆ ಇದರಿಂದ ತೊಂದರೆ ಎಂದ ಗ್ರಾಹಕರ ಆಯೋಗ

ಟಿಕೆಟ್ ರದ್ದುಗೊಳಿಸಬೇಕಾದರೆ ವೇಟಿಂಗ್ ಲಿಸ್ಟ್ ಪಟ್ಟಿಯಲ್ಲಿರುವ ವ್ಯಕ್ತಿ ನಿಗದಿತ ಸಮಯದಲ್ಲಿ ಟಿಕೆಟ್ ಕನ್ಫರ್ಮ್ ಆಗಿದೆ ಎಂಬ ಭರವಸೆ ಇರಿಸಿಕೊಳ್ಳಲು ಸದಾ ಸಾಧ್ಯವಿಲ್ಲ ಎಂದಿದೆ ಆದೇಶ.
Railways, Train
Railways, Train

ವೈಟಿಂಗ್‌ ಲಿಸ್ಟ್‌ನಲ್ಲಿರಸಲಾದ (ನಿರೀಕ್ಷಣಾ ಪಟ್ಟಿ) ಟಿಕೆಟ್‌ಗಳನ್ನು ರೈಲು ಹೊರಡುವ ಮೂವತ್ತು ನಿಮಿಷಗಳ ಮೊದಲು ರದ್ದುಗೊಳಿಸಿದರೆ ಮಾತ್ರ ಹಣ ಮರುಪಾವತಿ ಮಾಡಲಾಗುವುದು ಎಂಬ ನಿಯಮ ನ್ಯಾಯಸಮ್ಮತತೆಯಿಂದ ಕೂಡಿದ್ದು ಅದರಲ್ಲಿ ಗ್ರಾಹಕ ಹಿತಾಸಕ್ತಿ ಇಲ್ಲ ಎಂದು ಚಂಡೀಗಢ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಭಾರತ ಒಕ್ಕೂಟ ಮತ್ತು ಅಮನ್‌ದೀಪ್‌ ಸಿಂಗ್‌ ನಡುವಣ ಪ್ರಕರಣ] .

ರೈಲ್ವೆ ಪ್ರಯಾಣಿಕರ (ಟಿಕೆಟ್ ರದ್ದತಿ ಮತ್ತು ಶುಲ್ಕ ಮರುಪಾವತಿ) ನಿಯಮಾವಳಿ- 1998ರ ನಿಯಮ 7ರ ಪ್ರಕಾರ, ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರು ಟಿಕೆಟ್‌ ರದ್ದುಗೊಳಿಸಿ ಹಣ ಮರುಪಾವತಿ ಬಯಸಿದಲ್ಲಿ ರೈಲು ಹೊರಡುವ ನಿಗದಿತ ಸಮಯಕ್ಕಿಂತ ಮೂವತ್ತು ನಿಮಿಷಗಳ ಮೊದಲು ಅದನ್ನು ರದ್ದುಗೊಳಿಸಬೇಕು ಎನ್ನುತ್ತದೆ.

ಟಿಕೆಟ್‌ ಕನ್ಫರ್ಮ್‌ ಆಗಬಹುದು ಎನ್ನುವ ಭರವಸೆಯಲ್ಲಿರುವ ವೈಟಿಂಗ್‌ ಲಿಸ್ಟ್‌ನಲ್ಲಿರುವ ವ್ಯಕ್ತಿಗೆ ನಿಗದಿತ ಸಮಯದೊಳಗೆ ಟಿಕೆಟ್‌ ರದ್ದುಗೊಳಿಸಲಾಗದೆ ಹೋಗಬಹುದು. ಇಂತಹ ನಿಯಮದಿಂದ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ, ಅನಗತ್ಯ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ನ್ಯಾ. ಶೇಖರ್ ಅತ್ರಿ ಮತ್ತು ಸದಸ್ಯ ರಾಜೇಶ್ ಕೆ ಆರ್ಯ ಅವರಿದ್ದ ಪೀಠ ಹೇಳಿದೆ.

ಇಂತಹ ತಮ್ಮ ನಿಯಮದ ಮುಸುಕಿನಲ್ಲಿ ಅಪೀಲುದಾರರು (ರೈಲ್ವೇ ಇಲಾಖೆ) ಲಾಭ ಮಾಡಿಕೊಳ್ಳಲಾಗದು. ಒಂದೆಡೆ ಆಸನದ  ಲಭ್ಯತೆ ದೊರೆಯದ ಗ್ರಾಹಕರು ತಾವು ಪಾವತಿಸಿದ ಹಣ ಕಳೆದುಕೊಳ್ಳುತ್ತಾರೆ. ಅದೇ ವೇಳೆ ಅದೇ ಸೀಟಿನ ದೃಢೀಕರಣ ಪಡೆದ ಮತ್ತೊಬ್ಬ ಪ್ರಯಾಣಿಕನಿಂದಲೂ ರೈಲ್ವೆ ಶುಲ್ಕ ಪಡೆಯುತ್ತದೆ ಎಂದು ಆಯೋಗವು ಅಸಮಾಧಾನ ಸೂಚಿಸಿತು.

ದೂರುದಾರರಿಗೆ ₹ 8,000 ಪರಿಹಾರ ಮತ್ತು ದಾವೆ ವೆಚ್ಚದೊಂದಿಗೆ ಟಿಕೆಟ್ ಮೊತ್ತ ಮರುಪಾವತಿಸುವಂತೆ ಆದೇಶಿಸಿದ್ದ ಚಂಡೀಗಢ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಭಾರತೀಯ ರೈಲ್ವೆ ರಾಜ್ಯ ಆಯೋಗದಲ್ಲಿ ಪ್ರಶ್ನಿಸಿತ್ತು.

ಯಾವುದೇ ಗ್ರಾಹಕರಿಗೆ ಕಾಯ್ದಿರಿಸಿದ ಸೀಟುಗಳನ್ನು ಖಾತ್ರಿಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದ ರೈಲ್ವೆ ಇಲಾಖೆ, 1998ರ ನಿಯಮದ ಪ್ರಕಾರ ಅಂತಹ ವ್ಯಕ್ತಿಗಳಿಗೆ ಶುಲ್ಕ ಮರುಪಾವತಿ ಮಾಡುವುದಿಲ್ಲ . ದೂರುದಾರರು ಸಕಾಲದಲ್ಲಿ ಮರುಪಾವತಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸದ ಕಾರಣ, ಅದನ್ನು ನಿರಾಕರಿಸಲಾಗಿದೆ ಎಂದಿತ್ತು.

ಆದರೆ ರಾಜ್ಯ ಆಯೋಗವು ರೈಲ್ವೆಯ ನಡೆ ಅನ್ಯಾಯದಿಂದ ಕೂಡಿದ್ದು ಸೇವೆಯಲ್ಲಿನ ಕೊರತೆಯನ್ನು ಸೂಚಿಸುತ್ತದೆ. ಇದು ಹಣಕಾಸಿನ ನಷ್ಟಕ್ಕೆ ಕಾರಣವಾಗುವುದಲ್ಲದೆ ದೂರುದಾರರಿಗೆ ಮಾನಸಿಕ ಸಂಕಟ ಉಂಟು ಮಾಡುತ್ತದೆ ಎಂದಿದೆ.

Related Stories

No stories found.
Kannada Bar & Bench
kannada.barandbench.com