ಲೈವ್‌ ಸ್ಟ್ರೀಮಿಂಗ್‌, ಕಲಾಪ ರೆಕಾರ್ಡಿಂಗ್‌ ಸಂಬಂಧ ಕರಡು ಮಾದರಿ ನಿಯಮ ಬಿಡುಗಡೆ; ಸಲಹೆ-ಸೂಚನೆಗೆ ಸುಪ್ರೀಂ ಆಹ್ವಾನ

ಕರ್ನಾಟಕ, ಬಾಂಬೆ, ದೆಹಲಿ ಮತ್ತು ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಒಳಗೊಂಡ ಉಪ ಸಮಿತಿಯು ಮಾದರಿ ನಿಯಮಗಳನ್ನು ರೂಪಿಸಿದೆ.
Justice DY Chandrachud
Justice DY Chandrachud

ನ್ಯಾಯಾಲಯದ ಕಲಾಪ ಲೈವ್‌ ಸ್ಟ್ರೀಮಿಂಗ್‌ ಮತ್ತು ಅದರ ರೆಕಾರ್ಡಿಂಗ್‌ಗೆ ಸಂಬಂಧಿಸಿದಂತೆ ಭಾರತೀಯ ಸುಪ್ರೀಂ ಕೋರ್ಟ್‌ನ ಇ-ಸಮಿತಿಯು ಮಾದರಿ ನಿಯಮಗಳ ಕರಡನ್ನು ಸಾರ್ವಜನಿಕಗೊಳಿಸಿದ್ದು, ಸಂಬಂಧಪಟ್ಟ ಎಲ್ಲರಿಂದಲೂ ಸಲಹೆ-ಸೂಚನೆಗಳನ್ನು ಆಹ್ವಾನಿಸಿದೆ. ಕರ್ನಾಟಕ, ಬಾಂಬೆ, ದೆಹಲಿ ಮತ್ತು ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಒಳಗೊಂಡ ಉಪ ಸಮಿತಿಯು ಮಾದರಿ ನಿಯಮಗಳನ್ನು ರೂಪಿಸಿದೆ.

“ಉಪಸಮಿತಿಯು ಸ್ವಪ್ನಿಲ್‌ ತ್ರಿಪಾಠಿ ವರ್ಸಸ್‌ ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು ಗಣನೆಗೆ ತೆಗೆದುಕೊಂಡಿದೆ. ದಾವೆದಾರರು ಮತ್ತು ಸಾಕ್ಷಿಗಳ ಖಾಸಗಿತನ ಮತ್ತು ಗೌಪ್ಯತೆಯ ಕುರಿತಾದ ವಿಷಯಗಳ ಜೊತೆಗೆ ಉದ್ಯಮದ ಗೌಪ್ಯತೆ, ಕಲಾಪ ವೀಕ್ಷಿಸಲು ನಿಷೇಧ ಅಥವಾ ನಿರ್ಬಂಧ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಾನೂನುಗಳು ವಿಚಾರಣೆಗೆ ಷರತ್ತು ವಿಧಿಸುವುದು ಮುಂತಾದ ಅಂಶಗಳನ್ನು ಪರಿಗಣಿಸಿದೆ. ಅಲ್ಲದೆ, ಕೆಲವೊಮ್ಮೆ ಪ್ರಕರಣದ ಸೂಕ್ಷ್ಮತೆ ಅರಿತು ವಿಸ್ತೃತ ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯನ್ನೂ ಸಹ ಉಪ ಸಮಿತಿಯು ಅವಗಾಹನೆಗೊಳಪಡಿಸಿದೆ” ಎಂದು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಇ-ಸಮಿತಿ ವೆಬ್‌ಸೈಟ್‌ನಲ್ಲಿ ಮಾದರಿ ನಿಯಮಗಳ ಕರಡು ಲಭ್ಯವಿದೆ. ಇದರ ಮಧ್ಯೆ, ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಇ-ಸಮಿತಿ ಮುಖ್ಯಸ್ಥರಾದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಅವರ ಸಲಹೆ-ಸೂಚನೆಗಳಿಗೆ ಆಹ್ವಾನಿಸಿದ್ದಾರೆ.

Also Read
ನ್ಯಾಯಾಲಯ ಕಲಾಪದ ಲೈವ್‌ ಸ್ಟ್ರೀಮಿಂಗ್‌ಗೆ ನಿಯಮ, ಮೂಲಸೌಕರ್ಯ ಅಂತಿಮಗೊಳಿಸಲು ಇ-ಸಮಿತಿ ಸಿದ್ಧತೆ: ನ್ಯಾ. ಚಂದ್ರಚೂಡ್‌

“ನ್ಯಾಯದಾನ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರಿಗೂ ನ್ಯಾಯ ವ್ಯವಸ್ಥೆಗೆ ಸುಲಭವಾಗಿ ಪ್ರವೇಶಿಕೆ ಪಡೆಯುವುದು ಸಾಧ್ಯವಾಗುವ, ಪರಿಣಾಮಕಾರಿ ಮತ್ತು ನ್ಯಾಯಸಮ್ಮತವಾಗಿರುವ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸದಾ ಚಿಂತಿಸುತ್ತದೆ. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಇ-ಸಮಿತಿ ಹೊಂದಿರುವ ಉದ್ದೇಶವಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಕಲಾಪ ಲೈವ್‌ ಸ್ಟ್ರೀಮಿಂಗ್‌ ಮಾಡುವುದು ಭಾರತ ಸಂವಿಧಾನದ 21ನೇ ವಿಧಿಯಡಿ ನ್ಯಾಯದಾನ ಪಡೆಯುವ ಹಕ್ಕಿನ ಭಾಗವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಪಾರದರ್ಶಕತೆ, ಒಳಗೊಳ್ಳುವಿಕೆ ಮತ್ತು ನ್ಯಾಯಕ್ಕೆ ಪ್ರವೇಶವನ್ನು ಹೆಚ್ಚಿಸಲು, ಇ-ಸಮಿತಿಯು ಆದ್ಯತೆಯ ಮೇರೆಗೆ ನ್ಯಾಯಾಲಯದ ವಿಚಾರಣೆಯ ನೇರ ಪ್ರಸಾರದ ಯೋಜನೆಯನ್ನು ಕೈಗೆತ್ತಿಕೊಂಡಿದೆ” ಎಂದು ನ್ಯಾ. ಚಂದ್ರಚೂಡ್‌ ಹೇಳಿದ್ದಾರೆ.

ಇ-ಸಮಿತಿ ಮತ್ತು ಕೇಂದ್ರ ಕಾನೂನು ಇಲಾಖೆಯು ರಾಷ್ಟ್ರೀಯ ನೀತಿ ಮತ್ತು ಕಾರ್ಯನೀತಿಯ ಅಡಿಯಲ್ಲಿ ಭಾರತೀಯ ನ್ಯಾಯಾಂಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಜಾರಿಗೆ ಕೆಲಸ ಮಾಡುತ್ತಿವೆ. ಮಾದರಿ ಕರಡು ನಿಯಮಗಳಗಾಗಿ ಇಲ್ಲಿ ಕ್ಲಿಕ್ಕಿಸಿ. ಸಲಹೆ ಸೂಚನೆಗಳನ್ನು 30.06.2021ರ ಒಳಗೆ ecommittee@aij.gov.in ಗಳಿಗೆ ಕಳುಹಿಸಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com