ಬಾಜಿ ಕಟ್ಟಿ ಅಥವಾ ಕಟ್ಟದೇ ಆಡಿದರೂ ರಮ್ಮಿ ಜೂಜಾಟವಲ್ಲ: ಕರ್ನಾಟಕ ಹೈಕೋರ್ಟ್‌

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯಲ್ಲಿ ಕಾಣುವ ಬೆಟ್ಟಿಂಗ್‌ ಮತ್ತು ಜೂಜಾಟ ಪದಗಳನ್ನು ಕೌಶಲದ ಆಟದ ಪರಿಧಿಯಲ್ಲಿ ಸೇರಿಕೊಳ್ಳುವುದಿಲ್ಲ, ಸೇರಿಸಿಕೊಳ್ಳಬಾರದು ಎಂದು ನ್ಯಾ. ಕೃಷ್ಣಕುಮಾರ್‌ 325 ಪುಟಗಳ ಆದೇಶದಲ್ಲಿ ಹೇಳಿದ್ದಾರೆ.
Karnataka HC and Online games
Karnataka HC and Online games
Published on

ಬಾಜಿ ಕಟ್ಟಿ ಅಥವಾ ಬಾಜಿ ಕಟ್ಟದೇ ಆಡದಿದ್ದರೂ ರಮ್ಮಿ ಜೂಜಾಟವಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ರಮ್ಮಿಯನ್ನು ಆನ್‌ಲೈನ್‌ ಅಥವಾ ದೈಹಿಕವಾಗಿ ಆಡಿದರೂ ಅದು ಗಣನೀಯ ಮತ್ತು ಪ್ರಮುಖವಾಗಿ ಕೌಶಲದ ಆಟವೇ ವಿನಾ ಅವಕಾಶದ ಆಟವಲ್ಲ ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.

“ಬಾಜಿ ಕಟ್ಟಿ ಅಥವಾ ಬಾಜಿ ಕಟ್ಟದೇ ಆಡದಿದ್ದರೂ ರಮ್ಮಿ ಜೂಜಾಟವಲ್ಲ; ಆಫ್‌ಲೈನ್‌/ಭೌತಿಕ ರಮ್ಮಿ ಮತ್ತು ಆನ್‌ಲೈನ್‌/ಎಲೆಕ್ಟ್ರಾನಿಕ್‌/ಡಿಜಿಟಲ್‌ ರಮ್ಮಿಗೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಗಣನೀಯ ಮತ್ತು ಪ್ರಮುಖವಾಗಿ ಕೌಶಲದ ಆಟವೇ ವಿನಾ ಅವಕಾಶದ ಆಟವಲ್ಲ” ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಕಂಪೆನಿಗೆ ₹21,000 ಕೋಟಿ ತೆರಿಗೆ ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ ದಳ (ಡಿಜಿಜಿಐ) ಜಾರಿ ಮಾಡಿದ್ದ ಷೋಕಾಸ್‌ ನೋಟಿಸ್‌ ಅನ್ನು ವಜಾ ಮಾಡಿರುವ ಆದೇಶದಲ್ಲಿ ಹೈಕೋರ್ಟ್‌ ಮೇಲಿನಂತೆ ಹೇಳಿದೆ.

ಅವಕಾಶದ ಆಟಗಳನ್ನು ಹೊರತುಪಡಿಸಿದ ಇತರ ಆನ್‌ಲೈನ್‌ ಕೌಶಲದ ಆಟಗಳೂ ಸಹ ಜೂಜಾಟವಲ್ಲ ಎಂದು ನ್ಯಾಯಾಲಯ ಹೇಳಿದೆ.

ಗೇಮ್ಸ್‌ಕ್ರಾಫ್ಟ್‌ಗೆ ₹21,000 ಕೋಟಿ ತೆರಿಗೆ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರವು 2022ರ ಸೆಪ್ಟೆಂಬರ್‌ 8ರಂದು ನೋಟಿಸ್‌ ಜಾರಿ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ವಿತ್ತೀಯ ಪಾಲನೆಯೊಂದಿಗೆ ಆಡುವ ಕೌಶಲದ ಆಟಗಳು ಬೆಟ್ಟಿಂಗ್ ರೂಪ ಪಡೆಯುವುದಿಲ್ಲ. ಅಲ್ಲದೇ, ಕೌಶಲದ ಆಟಗಳ ಕ್ಷೇತ್ರದಲ್ಲಿಯೇ ಉಳಿದಿವೆ ಎಂದು ಕಂಪೆನಿಯು ವಾದಿಸಿತ್ತು. ಈ ಮಧ್ಯೆ, ನ್ಯಾಯಾಲಯವು ಕಂಪೆನಿಯ ವೇದಿಕೆಯಲ್ಲಿ ಆಡಲಾಗುವ ಆಟಗಳಿಗೆ ತೆರಿಗೆ ವಿಧಿಸಲಾಗದು ಎಂದಿತ್ತು.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಕಾಯಿದೆಯಲ್ಲಿ ಕಾಣುವ ಬೆಟ್ಟಿಂಗ್‌ ಮತ್ತು ಜೂಜಾಟ ಪದಗಳು ಕೌಶಲದ ಆಟದ ಪರಿಧಿಯಲ್ಲಿ ಸೇರಿಕೊಳ್ಳುವುದಿಲ್ಲ ಮತ್ತು ಸೇರಿಸಬಾರದು ಎಂದು ನ್ಯಾ. ಕೃಷ್ಣಕುಮಾರ್‌ 325 ಪುಟಗಳ ಆದೇಶದಲ್ಲಿ ಹೇಳಿದ್ದಾರೆ.

Kannada Bar & Bench
kannada.barandbench.com