ರೆಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿನ ಕೊಲೆ ಪ್ರಕರಣ: ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಆರೋಪಿಯನ್ನು ಬಂಧಿಸಿದ ಸಂದರ್ಭದಲ್ಲಿ ಆತ 11ನೇ ತರಗತಿ ವಿದ್ಯಾರ್ಥಿಯಾಗಿದ್ದ. ನವೆಂಬರ್ 7, 2017 ರಿಂದ ಆತ ಸುಧಾರಣಾ ಗೃಹದಲ್ಲಿ ಸೆರೆಯಲ್ಲಿದ್ದ.
ರೆಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿನ ಕೊಲೆ ಪ್ರಕರಣ: ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
Published on

ದೇಶದೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ, ಹರಿಯಾಣ ಸಮೀಪದ ಗುರುಗಾಂವ್‌ನ ರೆಯಾನ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದಿದ್ದ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಕೊಲೆ ಪ್ರಕರಣದ ಆರೋಪಿಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ. 2017ರಲ್ಲಿ ನಡೆದಿದ್ದ ಘಟನೆಯಲ್ಲಿ ಬಾಲಕನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

ಜಾಮೀನು ನೀಡುವ ವೇಳೆ, ಆರೋಪಿ ಅರ್ಜಿದಾರನನ್ನು ನಿರಂತರವಾಗಿ ಬಂಧನದಲ್ಲಿರಿಸಿರುವುದು ಕಾನೂನಿನ ಪ್ರಕಾರ ಆತನ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಹೇಳಿತು.

"ಅಪರಾಧದ ಗಂಭೀರ ಸ್ವರೂಪವನ್ನು ಗಮನಿಸುವುದರ ಹೊರತಾಗಿಯೂ  ಪ್ರಕರಣದಲ್ಲಿ ಅರ್ಜಿದಾರನ ಸ್ವಾತಂತ್ರ್ಯ ಮೊಟಕುಗೊಳಿಸಲಾಗಿದ್ದು ಸುಮಾರು ಐದು ವರ್ಷಗಳ ಕಾಲ ಬಂಧನದಲ್ಲಿದ್ದಾರೆ. ಪ್ರಕರಣದ ಅರ್ಹತೆ ಬಗ್ಗೆ ಮಾತನಾಡದೆ, ಪ್ರಕರಣದ ಕುರಿತ ವಿರುದ್ಧವಾದ ಅಭಿಪ್ರಾಯಗಳು ಮತ್ತು ಸಮಾನ ಅವಕಾಶದ ಅಂಶವನ್ನು ನ್ಯಾಯಾಲಯವು ನಿರ್ಲಕ್ಷಿಸಲಾಗದು. ಬಂಧನಕ್ಕೊಳಗಾದಾಗ 16 ವರ್ಷ ವಯಸ್ಸಿನವರಾಗಿದ್ದ ಅರ್ಜಿದಾರನಿಗೆ ಈಗ 21 ವರ್ಷ ಪೂರೈಸಿದ್ದು ಪ್ರಸ್ತುತ ಅವರನ್ನು ಸುಧಾರಣಾ ಗೃಹದಲ್ಲಿ ಇರಿಸಲಾಗಿದ್ದರೂ ವಿಚಾರಣಾ ಪೂರ್ವದಲ್ಲಿನ ನಿರಂತರ ಬಂಧನ ಆತನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು” ಎಂದು ನ್ಯಾಯಾಲಯ ಹೇಳಿದೆ.

Also Read
ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ತಮಿಳುನಾಡಿನಲ್ಲಿ ಬಾಲಾಪರಾಧಿ ಸೇರಿದಂತೆ ಐವರ ಬಂಧನ

ತಾನು ನೀಡುತ್ತಿರುವ ಮಧ್ಯಂತರ ಪರಿಹಾರ ವಿಚಾರಣಾ ಅಧಿಕಾರಿ (ಪ್ರೊಬೆಷನರಿ ಆಫೀಸರ್‌) ವಿಧಿಸುವ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿರುವ ನ್ಯಾಯಾಲಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಆದೇಶಿಸಿದೆ.  

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಪರಿಶೀಲನೆ ನಡೆಸಿದ್ದ ಬಾಲಾಪರಾಧ ನ್ಯಾಯ ಮಂಡಳಿಯು ಆರೋಪಿಯನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.

ಹಿನ್ನೆಲೆ

ರೆಯಾನ್ ಶಾಲೆಯ 2ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಾಲೆಯ ಒಳಗೆ 2017ರಲ್ಲಿ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಕೃತ್ಯವನ್ನು ಒಪ್ಪಿಕೊಂಡದ್ದಕ್ಕಾಗಿ ಶಾಲೆಯ ಬಸ್‌ ಕಂಡಕ್ಟರ್‌ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಬಳಿಕ ಕೊಲೆ ಮಾಡಿರುವ ಶಂಕೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿತ್ತು. ಆತ 2017 ರಿಂದ ಬಂಧನದಲ್ಲಿದ್ದ.

Kannada Bar & Bench
kannada.barandbench.com