'ವಂಶವೃಕ್ಷ' ಅನಧಿಕೃತ ಅನುವಾದ: ₹ 5 ಲಕ್ಷ ಪರಿಹಾರ ನೀಡಲು ಹೈದರಾಬಾದ್‌ನ ಪ್ರಕಾಶನ ಸಂಸ್ಥೆಗೆ ಮೈಸೂರು ನ್ಯಾಯಾಲಯ ಆದೇಶ

ಅನುವಾದಿತ ಕೃತಿಯ ಮರುಮುದ್ರಣ ಅಥವಾ ಪ್ರತಿಗಳನ್ನು ಮಾರಾಟ ಮಾಡದಂತೆಯೂ ಹಾಗೂ ಮಾರಾಟವಾಗದ ಪ್ರತಿಗಳನ್ನು ಮರಳಿಸುವಂತೆಯೂ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ ಸೂಚಿಸಿದ್ದಾರೆ.
ಎಸ್‌ ಎಲ್‌ ಭೈರಪ್ಪ ಮತ್ತು ವಂಶವೃಕ್ಷ
ಎಸ್‌ ಎಲ್‌ ಭೈರಪ್ಪ ಮತ್ತು ವಂಶವೃಕ್ಷ

ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪ ಅವರ ʼವಂಶವೃಕ್ಷʼ ಕೃತಿಯನ್ನು ಮೂಲ ಲೇಖಕರ ಅನುಮತಿ ಪಡೆಯದೆ ತೆಲುಗು ಭಾಷೆಗೆ ಅನುವಾದಿಸಿ ಹಕ್ಕುಸ್ವಾಮ್ಯ ಉಲ್ಲಂಘಿಸಿದ್ದ ʼಹೈದರಾಬಾದ್‌ನ ಪ್ರಿಯದರ್ಶಿನಿ ಪ್ರಚುರಣಾಲುʼ ಪ್ರಕಾಶನ ಸಂಸ್ಥೆ ₹ 5.05 ಲಕ್ಷ ಪರಿಹಾರ ನೀಡುವಂತೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಈಚೆಗೆ ತೀರ್ಪು ನೀಡಿದೆ.

ಪ್ರಕಾಶನ ಸಂಸ್ಥೆಯ ವತ್ಸಲಾ ಅವರು ಭೈರಪ್ಪ ಅವರಿಗೆ ₹ 5.05 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಾಗೂ 1960ರಲ್ಲಿ ಪ್ರಕಟಿಸಲಾದ ವಂಶವೃಕ್ಷ ಸೇರಿದಂತೆ ಅನುವಾದಿತ ಕೃತಿಯ ಮರುಮುದ್ರಣ ಅಥವಾ ಪ್ರತಿಗಳನ್ನು ಮಾರಾಟ ಮಾಡದಂತೆ ಹಾಗೂ ಮಾರಾಟವಾಗದ ಪ್ರತಿಗಳನ್ನು ಮರಳಿಸುವಂತೆ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ ಡಿ. 21ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ವಂಶವೃಕ್ಷ ಕಾದಂಬರಿಯನ್ನು ತೆಲುಗಿಗೆ ಭಾಷಾಂತರಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಎಂಬುವವರಿಗೆ ನೀಡಲಾಗಿತ್ತು. ತೆಲುಗಿನಲ್ಲಿ ʼವಂಶವೃಕ್ಷಂʼ ಹೆಸರಿನಲ್ಲಿ ಕೃತಿ ಪ್ರಕಟವಾಗಿತ್ತು. ಸನಗರಂ ಅವರ ನಿಧನಾನಂತರ ತೆಲುಗಿನಲ್ಲಿ ಬೇರೆಯವರಿಗೆ ಭಾಷಾಂತರಿಸುವ ಹಕ್ಕನ್ನು ಭೈರಪ್ಪ ಅವರು ನೀಡಿರಲಿಲ್ಲ.

ಆದರೂ ʼಪ್ರಿಯದರ್ಶಿನಿ ಪ್ರಚುರಣಾಲುʼ ಅನುಮತಿ ಪಡೆಯದೆ ಕೃತಿಯನ್ನು ಅನುವಾದಿಸಿ ಪ್ರಕಟಿಸಿತ್ತು. ಒಂದು ಪುಸ್ತಕಕ್ಕೆ ₹ 360 ನಿಗದಿಗೊಳಿಸಿ ಒಂದು ಸಾವಿರ ಪ್ರತಿ ಮುದ್ರಿಸಲಾಗಿತ್ತು. ಈ ಸಂಬಂಧ ತಮ್ಮ ವಕೀಲ ಒ ಶಾಮ್‌ ಭಟ್‌ ಅವರ ಮೂಲಕ ವತ್ಸಲಾ ಅವರಿಗೆ ಭೈರಪ್ಪ ನೋಟಿಸ್‌ ನೀಡಿದ್ದರು. ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ದೊರೆಯದೇ ಇದ್ದುದರಿಂದ ಭೈರಪ್ಪ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕೋರ್ಟ್‌ ಕಮಿಷನರ್‌ ಪಿ ಜೆ ರಾಘವೇಂದ್ರ ಅವರು ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಸಾಕ್ಷ್ಯಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ವಂಶವೃಕ್ಷ ಕಾದಂಬರಿಯನ್ನು ತೆಲುಗು ಮಾತ್ರವಲ್ಲದೆ ಮರಾಠಿ ಹಿಂದಿ ಉರ್ದು ಹಾಗೂ ಇಂಗ್ಲಿಷ್‌ ಭಾಷೆಗಳಿಗೆ ಅನುವಾದಿಸಲಾಗಿದೆ.  ಕೃತಿಯನ್ನು ಅದೇ ಹೆಸರಿನಲ್ಲಿ ರಂಗಕರ್ಮಿ ಬಿ ವಿ ಕಾರಂತ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ ಬೆಳ್ಳಿತೆರೆಗೆ ತಂದಿದ್ದರು. ತೆಲುಗಿನಲ್ಲಿ ʼವಂಶವೃಕ್ಷಂʼ ಹಾಗೂ ಹಿಂದಿಯಲ್ಲಿ ʼಪ್ಯಾರ್‌ ಕಾ ಸಿಂದೂರ್‌ʼ ಹೆಸರಿನಲ್ಲಿ ಕಾದಂಬರಿ ಸಿನಿಮಾ ಆಗಿತ್ತು.

Kannada Bar & Bench
kannada.barandbench.com