ಕೇರಳದ ತಿರುವಾಂಕೂರು ದೇವಸ್ಥಾನ ಮಂಡಳಿಯು ನಕಲಿ ರಸೀದಿಗಳ ಸಲ್ಲಿಸುವ ಮೂಲಕ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದು. ದೇವಸ್ಥಾನದ ವಿಚಕ್ಷಣಾ ದಳವನ್ನು ರದ್ದುಪಡಿಸಿರುವ ಕುರಿತು ಮಾಧ್ಯಮ ವರದಿಯನ್ನು ಆಧರಿಸಿ ಮಂಗಳವಾರ ಕೇರಳ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಮಲೆಯಾಳಂನ ದೈನಿಕ ಮಾತೃಭೂಮಿ ಪತ್ರಿಕೆಯಲ್ಲಿ ದೇವಸ್ಥಾನ ಮಂಡಳಿಯು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಹಿರಿಯ ಅಧಿಕಾರಿಗಳು ದೇವಸ್ಥಾನದ ವಿಚಕ್ಷಣಾ ದಳವನ್ನು ರದ್ದುಪಡಿಸಿದ್ದಾರೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಯನ್ನು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠವು ಗಂಭೀರವಾಗಿ ಪರಿಗಣಿಸಿತು.
ಶಬರಿಮಲೆಯ ಅತಿಥಿ ಗೃಹಕ್ಕೆ ಸಂಬಂಧಿಸಿದಂತೆ ಸೃಷ್ಟಿಸಲಾಗಿರುವ ನಕಲಿ ರಸೀದಿಗಳು ಮತ್ತು ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಎಸಗಿರುವ ಅಕ್ರಮಗಳು ಬೆಳಕಿಗೆ ಬಂದರೆ ಸಮಸ್ಯೆಯಾಗುತ್ತದೆ, ಬಂಧನಕ್ಕೆ ಒಳಗಾಗಬೇಕಾಗುತ್ತದೆ ಎಂದು ವಿಚಕ್ಷಣಾ ದಳ ರದ್ದುಪಡಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದೇವಸ್ಥಾನದ ವಿಚಕ್ಷಣಾ ದಳದಿಂದ ಇಬ್ಬರು ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ತೆಗೆದುಹಾಕಲಾಯಿತು. ಶೀಘ್ರದಲ್ಲೇ ನಿವೃತ್ತರಾಗಲಿರುವ ಪೊಲೀಸ್ ವರಿಷ್ಠಾಧಿಕಾರಿಯನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲಾ ಅಧಿಕಾರಿಗಳನ್ನು ಪೊಲೀಸ್ ಇಲಾಖೆಗೆ ಕಳುಹಿಸಲಾಗಿದೆ. ಅತಿಥಿ ಗೃಹದಲ್ಲಿ ನೆಲೆಸಿದ್ದ ಗಣ್ಯರು ಮತ್ತು ಉನ್ನತಮಟ್ಟದ ಅಧಿಕಾರಿಗಳಿಗೆ ಪೂರೈಸಲಾದ ಆಹಾರಕ್ಕೆ ಸಂಬಂಧಿಸಿದಂತೆ ಅಪಾರ ಖರ್ಚು ಮಾಡಿರುವ ರಸೀದಿಗಳು ವಿಚಕ್ಷಣಾ ದಳಕ್ಕೆ ಸಿಕ್ಕಿವೆ ಎಂದು ವರದಿಯಲ್ಲಿ ವಿವರಿಸಿರುವುದನ್ನು ಪೀಠವು ಗಣನೆಗೆ ತೆಗೆದುಕೊಂಡಿದೆ.
ಹಿರಿಯ ಅಧಿಕಾರಿಗಳಿಗೆ ದೇವಸ್ಥಾನ ವಿಚಕ್ಷಣಾ ತನಿಖೆಯಿಂದ ಎದುರಾಗಬಹುದಾದ ಸಂಕಷ್ಟದಿಂದ ಅಳುಕುಗೊಂಡು ರಾಜ್ಯ ವಿಚಕ್ಷಣಾ ದಳಕ್ಕೆ ಪ್ರಕರಣವನ್ನು ವಹಿಸಲಾಗಿದೆ ಎಂಬುದನ್ನು ಪೀಠವು ಗಂಭೀರವಾಗಿ ಪರಿಗಣಿಸಿದೆ. ಫೆಬ್ರವರಿ 3ಕ್ಕೆ ವಿಚಾರಣೆ ಮುಂದೂಡಲಾಗಿದೆ.