ನ್ಯಾ. ರೋಹಿಂಟನ್ ಯತ್ನದ ಹೊರತಾಗಿಯೂ ನ್ಯಾ. ಕುರೇಶಿ ಅವರಿಗೆ ಪದೋನ್ನತಿ ದೊರೆಯದೆ ಹೋದದ್ದು ಬೇಸರದ ಸಂಗತಿ: ಪಂಚು

ನ್ಯಾಯಮೂರ್ತಿ ಕುರೇಶಿ ಅವರನ್ನು ಅತ್ಯುತ್ತಮ ನ್ಯಾಯಮೂರ್ತಿ ಎಂದು ಇತಿಹಾಸ ನೆನಪಿಸಿಕೊಳ್ಳಲಿರುವುದರಿಂದ ಸುಪ್ರೀಂ ಕೋರ್ಟ್ ಆಸ್ತಿಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಪಂಚು ಬಣ್ಣಿಸಿದರು.
Justice Akil Kureshi
Justice Akil Kureshi
Published on

ಕೊಲಿಜಿಯಂನ ಭಾಗವಾಗಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರ ಯತ್ನದ ಹೊರತಾಗಿಯೂ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಅಕಿಲ್‌ ಕುರೇಶಿ ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯದ ಬಗ್ಗೆ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು  ಬೇಸರ ವ್ಯಕ್ತಪಡಿಸಿದರು.

ದ ಜ್ಯೂನಿಯರ್ಸ್‌ ಆಫ್‌ ಮಿಸ್ಟರ್‌ ಎಸ್‌ ಗೋವಿಂದನ್‌ ಸಂಘಟನೆ ತಮಿಳುನಾಡಿನ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಪ್ರಸಿದ್ಧ ವಕೀಲ ಎಸ್‌ ಗೋವಿಂದನ್‌ ಅವರ ಸ್ಮರಣಾರ್ಥ ಭಾನುವಾರ ಚೆನ್ನೈನಲ್ಲಿ ಆಯೋಜಿಸಿದ್ದ ವಕೀಲ ವೃತ್ತಿಯಲ್ಲಿ ನೈತಿಕತೆಗಾಗಿ ಎಸ್‌ಜಿಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಶಸ್ತಿಗೆ ಭಾಜನರಾದವರಲ್ಲಿ ನ್ಯಾ. ಕುರೇಶಿ ಕೂಡ ಒಬ್ಬರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಭಾಗವಾಗಿದ್ದ ನ್ಯಾ, ನಾರಿಮನ್ ಅವರು ಕುರೇಶಿ ಅವರಿಗೆ ಪದೋನ್ನತಿ ನೀಡಬೇಕೆಂದು ಒತ್ತಾಯಿಸಿದರೂ ಕೊಲಿಜಿಯಂನ ಉಳಿದ ನಾಲ್ವರು ನ್ಯಾಯಮೂರ್ತಿಗಳು ಶಿಫಾರಸಿಗೆ ಮುಂದಾಗಲಿಲ್ಲ. ಹೀಗಾಗಿ ನ್ಯಾ. ಕುರೇಶಿ ಅವರು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು.

Sriram Panchu, Senior Advocate
Sriram Panchu, Senior Advocate

ನ್ಯಾಯಮೂರ್ತಿ ಕುರೇಶಿ ಅವರನ್ನು ಅತ್ಯುತ್ತಮ ನ್ಯಾಯಮೂರ್ತಿ  ಎಂದು ಇತಿಹಾಸ ನೆನಪಿಸಿಕೊಳ್ಳಲಿರುವುದರಿಂದ ಸುಪ್ರೀಂ ಕೋರ್ಟ್ ಆಸ್ತಿಯೊಂದನ್ನು ಕಳೆದುಕೊಂಡಂತಾಗಿದೆ. ಇದೊಂದು ನೋವಿನ ಸಂಗತಿ ಎಂದು ಪಂಚು ತಿಳಿಸಿದರು.

ಕಾರ್ಯಕ್ರಮದಲ್ಲಿ ತಮಿಳುನಾಡಿನ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಮಾತನಾಡಿ ನ್ಯಾಯಮೂರ್ತಿಗಳಾದ ಕುರೇಶಿ ಮತ್ತು ಎಸ್‌ ಮುರಳೀಧರ್‌ ಅವರಂತೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯದವರು ಸ್ಮರಣೀಯರಾಗಿ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.

 “ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದವರಿಗಿಂತಲೂ ಇಂತಹವರು ಹೆಚ್ಚು ನೆನಪಿನಲ್ಲಿ ಉಳಿಯುತ್ತಾರೆ. ನ್ಯಾ. ಕುರೇಶಿ ಅವರಂತೆ ಗೆಳೆಯ ಎಸ್‌ ಮುರಳೀಧರ್‌ ಕೂಡ ಅಂತಹ ಅದೃಷ್ಟಶಾಲಿಗಳಲ್ಲಿ ಒಬ್ಬರು” ಎಂದು ಮೆಚ್ಚುಗೆ ಸೂಸಿದರು.

ಮಾರ್ಚ್ 5, 2022 ರಂದು ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಕುರೇಶಿ ಅವರು ತ್ರಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿ ಎ ಎಸ್ ಓಕಾ ಅವರ ಬಳಿಕ ದೇಶದ ಎರಡನೇ ಹಿರಿಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದರೂ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲು ಕೊಲಿಜಿಯಂ ಶಿಫಾರಸು ಮಾಡಿದ ಒಂಬತ್ತು ಹೆಸರುಗಳಲ್ಲಿ ನ್ಯಾ. ಕುರೇಶಿ ಅವರಿಗೆ ಸ್ಥಾನ ದೊರೆತಿರಲಿಲ್ಲ.

Kannada Bar & Bench
kannada.barandbench.com