

ಬೇಲೆಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಹೊಸದಾಗಿ ವೈದ್ಯಕೀಯ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜಾರಿ ನಿರ್ದೇಶನಾಲಯ ವ್ಯಕ್ತಪಡಿಸಿರುವುದರಿಂದ ವೈದ್ಯರ ಮಾಹಿತಿ ಒದಗಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ವಿಚಾರಣೆಗೆ ಸಹಕಾರಿಸುತ್ತಿಲ್ಲ ಎಂದು ಈಚೆಗೆ ಹೊರಡಿಸಿರುವ ಜಾಮೀನುರಹಿತ ಬಂಧನ ವಾರೆಂಟ್ ಜಾರಿ ಮಾಡಿರುವುದು ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದ್ದನ್ನು ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಸೈಲ್ ಆರೋಗ್ಯ ಕುರಿತಾದ ಎಲ್ಲಾ ವರದಿಗಳು ಅಂಗಾಂಗದ ಸದ್ಯದ ಸ್ಥಿತಿಗತಿಯ ಬಗ್ಗೆ ಹೇಳಿವೆ. ಇಎಸ್‌ಐ ಆಸ್ಪತ್ರೆ ವರದಿ ನೀಡಿದ ಬಳಿಕವೂ ಸೈಲ್ ಅವರು ಪ್ರವಾಸ ಕೈಗೊಂಡಿದ್ದಾರೆ. ಹೊರಗಡೆ ಹೋದಾಗ ಊಟ ಮಾಡುತ್ತಾರೆ ಎಂದರ್ಥ. ನ್ಯಾಯಾಲಯವು ವೈದ್ಯಕೀಯ ಜಾಮೀನು ನೀಡುವ ಕುರಿತು ನಿರ್ಧರಿಸುವುದರಿಂದ ಆರೋಗ್ಯ ತಪಾಸಣಾ ವರದಿಯು ಶೇ.100 ನಿಷ್ಪಕ್ಷಪಾತವಾಗಿರಬೇಕು. ಕೇಂದ್ರೀಯ ಆಸ್ಪತ್ರೆಯ ವೈದ್ಯರು ಅವರನ್ನು ಪರಿಶೀಲಿಸಿ ವರದಿ ನೀಡಿದರೆ ಅದು ಯಾವುದೇ ದೃಷ್ಟಿಕೋನದಿಂದಲೂ ನಿಷ್ಪಕ್ಷಪಾತವಾಗಿರಲಿದೆ” ಎಂದರು.
ಸೈಲ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಇ ಡಿ ಕೋರಿಕೆಯ ಮೇರೆಗೆ ಮೂರು ಬಾರಿ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸಲಾಗಿದೆ. 10.9.2025ರಂದು ಸೈಲ್ ಅವರನ್ನು ಇ ಡಿ ಕಸ್ಟಡಿಗೆ ಪಡೆದಿತ್ತು. ಈ ಸಂದರ್ಭದಲ್ಲಿ ತಪಾಸಣೆ ನಡೆಸಲಾಗಿ, ಸೈಲ್‌ಗೆ ಯಕೃತ್ ಕಸಿ ಮಾಡಬೇಕು ಎಂದು ಹೇಳಲಾಗಿದೆ. ಇ ಡಿ ಕಸ್ಟಡಿಯಲ್ಲಿದ್ದಾಗಲೇ ಸೈಲ್ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. 12.9.2025ರಂದು ಸೈಲ್ ಆರೋಗ್ಯ ಪರಿಸ್ಥಿತಿ ವಿಷಮಿಸಿದ್ದರಿಂದ ಇ ಡಿಯು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ವೈದ್ಯಕೀಯ ಮಧ್ಯಂತರ ಜಾಮೀನು ನೀಡಿತ್ತು. ಆನಂತರ 7.11.2025ರಂದು ವಿಚಾರಣಾಧೀನ ನ್ಯಾಯಾಲಯ ವೈದ್ಯಕೀಯ ಜಾಮೀನು ರದ್ದುಪಡಿಸಿತ್ತು. ಇದರ ಬೆನ್ನಿಗೇ ಸೈಲ್ ಹೈಕೋರ್ಟ್ ಮೆಟ್ಟಿಲೇರಿದ್ದು, 10.11.2025ರಂದು ಈ ನ್ಯಾಯಾಲಯವು ವೈದ್ಯಕೀಯ ಜಾಮೀನು ಮುಂದುವರಿಸಿದೆ” ಎಂದು ವಿವರಿಸಿದರು.
“ಆನಂತರ ಇ ಡಿ ಕೋರಿಕೆಯಂತೆ ಏರ್ ಕಮಾಂಡ್ ಆಸ್ಪತ್ರೆ, ಆನಂತರ ಬಿಎಂಸಿ ಆಸ್ಪತ್ರೆಯಲ್ಲಿ ಸೈಲ್ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗುವಂತೆ ಇ ಡಿ ಸೂಚಿಸಿತ್ತು. 27.11.2025ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿರುವ ವರದಿಯನ್ನೂ ಸಲ್ಲಿಸಲಾಗಿದೆ. ಈಗ ಇ ಡಿಯು ಯಾವುದೇ ವೈದ್ಯಕೀಯ ವರದಿಗಳ ಬಗ್ಗೆ ಆಕ್ಷೇಪಿಸಿಲ್ಲ. ಆದರೆ, ಇನ್ನೊಂದು ಪರೀಕ್ಷೆ ನಡೆಸೋಣ ಎನ್ನುತ್ತಿದೆ. ಮೂರು ಬಾರಿ ಆರೋಗ್ಯ ತಪಾಸಣೆಗೆ ಒಳಗಾಗಿರುವ ವರದಿ ನೀಡಿದರೂ ಅದು ಸುಳ್ಳು ಅಥವಾ ತಿರುಚಿರುವ ವರದಿ ಎಂದು ಹೇಳುವುದಿಲ್ಲ. ಈಗ ದೆಹಲಿಯಿಂದ ವೈದ್ಯರೊಬ್ಬರು ಬಂದು ತಪಾಸಣೆ ನಡೆಸುತ್ತಾರೆ ಎಂದು ಹೇಳಲಾಗಿದೆ. ಇದು ಸೈಲ್ ಅವರ ಆರೋಗ್ಯ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಲ್ಲ” ಎಂದರು.
“ವ್ಯಕ್ತಿಯೊಬ್ಬ ವೈದ್ಯಕೀಯ ಪರಿಸ್ಥಿತಿಗೆ ಚಿಕಿತ್ಸೆಗೆ ಒಳಪಡುವುದಕ್ಕೂ ಸೈಲ್ ಪ್ರಭಾವಿ ಎನ್ನುವುದಕ್ಕೆ ಏನು ಸಂಬಂಧ? ಈಗ ಸೈಲ್ ಅವರಿಗೆ ವೈದ್ಯಕೀಯ ಜಾಮೀನು ನಿರಾಕರಿಸಿದರೆ ಅವರು ಇ ಡಿ ಕಸ್ಟಡಿಗೆ ಹೋಗುವುದಿಲ್ಲ. ನ್ಯಾಯಾಂಗ ಬಂಧನಕ್ಕೆ ಹೋಗುತ್ತಾರೆ” ಎಂದರು.
ಇದನ್ನು ಆಲಿಸಿದ ಪೀಠವು “ಸತೀಶ್ ಸೈಲ್ ಅವರನ್ನು ಹೊಸದಾಗಿ ವೈದ್ಯಕೀಯ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜಾರಿ ನಿರ್ದೇಶನಾಲಯ ಹೊಂದಿದೆ. ಹೀಗಾಗಿ, ಯಾವ ವೈದ್ಯರು ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಮಾಹಿತಿಯನ್ನು ಇ ಡಿ ನೀಡಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿತು.