ಕುರಿ ಮಾಂಸ ಮಾರಾಟದ ಅಂಗಡಿಯಲ್ಲಿ ಗೋಮಾಂಸ ಮಾರಾಟದ ಆರೋಪ; ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್‌

ಪ್ರಕರಣದಲ್ಲಿನ ಇಬ್ಬರು ಆರೋಪಿಗಳು ಈಗಾಗಲೇ ಬಂಧನಕ್ಕೆ ಒಳಗಾಗಿ ವಿಚಾರಣಾಧೀನ ನ್ಯಾಯಾಲಯದಿಂದ ಜಾಮೀನು ಸಹ ಪಡೆದುಕೊಂಡಿದ್ದಾರೆ. ಇದರಿಂದ ಅರ್ಜಿದಾರರಿಗೆ ಜಾಮೀನು ನಿರಾಕರಿಸಲು ಯಾವುದೇ ಸಕಾರಣ ಇಲ್ಲ ಎಂದ ನ್ಯಾಯಾಲಯ.
Justice T G Shivashankare Gowda
Justice T G Shivashankare Gowda
Published on

ಕುರಿ ಮಾಂಸದ ಅಂಗಡಿಯಲ್ಲಿ ಗೋವಿನ ಮಾಂಸ ಮಾರಾಟ ಮಾಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ [ಹೈದರ್‌ ಅಲಿ ಅಲಿಯಾಸ್‌ ತಾಜು ವರ್ಸಸ್‌ ಕರ್ನಾಟಕ ರಾಜ್ಯ].

ಪ್ರಕರಣ ಸಂಬಂಧ ಕರ್ನಾಟಕ ಜಾನುವಾರು ಹತ್ಯೆ ಪತಿಬಂಧಕ ಮತ್ತು ಸಂರಕ್ಷಣೆ ಕಾಯಿದೆ-2020ರ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಹೈದರ್‌ ಅಲಿ ಅಲಿಯಾಸ್‌ ತಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಆಟೋರಿಕ್ಷಾದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಆ ಇಬ್ಬರು ಆರೋಪಿಗಳು, ಅರ್ಜಿದಾರ ತಮಗೆ ಗೋಮಾಂಸ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಅರ್ಜಿದಾರ ಶೇ.60ರಷ್ಟು ಅಂಗವೈಕಲ್ಯ ಹೊಂದಿರುವುದನ್ನು ದೃಢಪಡಿಸಿ ಬೆಂಗಳೂರು ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣ ಪತ್ರವನ್ನು ಆತನ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇಬ್ಬರು ಆರೋಪಿಗಳು ಈಗಾಗಲೇ ಬಂಧನಕ್ಕೆ ಒಳಗಾಗಿ ವಿಚಾರಣಾಧೀನ ನ್ಯಾಯಾಲಯದಿಂದ ಜಾಮೀನು ಸಹ ಪಡೆದುಕೊಂಡಿದ್ದಾರೆ. ಇದರಿಂದ ಅರ್ಜಿದಾರರಿಗೆ ಜಾಮೀನು ನಿರಾಕರಿಸಲು ಯಾವುದೇ ಸಕಾರಣ ಇಲ್ಲ. ಷರತ್ತುಗಳನ್ನು ವಿಧಿಸಿ ಜಾಮೀನು ನೀಡಬಹುದಾಗಿದೆ. ಅರ್ಜಿದಾರ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷ್ಯಧಾರ ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಲಿ ಅವರು ಹೊಸಕೋಟೆಯಲ್ಲಿ ಮಾಂಸ (ಕುರಿ ಮಾಂಸ) ಮಾರಾಟ ಅಂಗಡಿ ನಡೆಸುತ್ತಿದ್ದಾರೆ. ಆತ ಶೇ.60ರಷ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರಿಂದ ದನದ ಮಾಂಸ ಖರೀದಿಸಿದ್ದಾಗಿ ಮೊದಲ ಮತ್ತು ಎರಡನೇ ಆರೋಪಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಅರ್ಜಿದಾರ ಅಲಿಯನ್ನು ಆರೋಪಿಯಾಗಿಸಲಾಗಿದೆ. ಆದರೆ, ಪೊಲೀಸರು ಅರ್ಜಿದಾರರಿಂದ ಗೋಮಾಂಸ ಜಪ್ತಿ ಮಾಡಿಲ್ಲ. ನಿರೀಕ್ಷಣಾ ಜಾಮೀನು ಮಂಜೂರಾತಿಗೆ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೂ ಬದ್ಧವಾಗಿರುತ್ತಾರೆ. ಆದ್ದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ವಕೀಲರು, ಕುರಿ ಮಾಂಸದ ವ್ಯಾಪಾರ ಅಂಗಡಿ ನಡೆಸುತ್ತಿದ್ದ ಅರ್ಜಿದಾರರು, ಗೋಮಾಂಸ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಆರೋಪವಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕಿದೆ. ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ಪಡೆಯುವ ಅರ್ಹತೆ ಅರ್ಜಿದಾರ ಹೊಂದಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಬೇಕು ಎಂದು ಕೋರಿದ್ದರು.

Attachment
PDF
Hyder Ali Vs State of Karnataka.pdf
Preview
Kannada Bar & Bench
kannada.barandbench.com