ಫ್ಲ್ಯಾಟ್‌ ಬೇರೊಬ್ಬರಿಗೆ ಮಾರಾಟ: ದೂರುದಾರರಿಗೆ ಬಡ್ಡಿ ಸಮೇತ ₹17 ಲಕ್ಷ ಪಾವತಿಸಲು ಡಿಕೆ ಸಹೋದರರಿಗೆ ಆದೇಶ

ದೂರುದಾರರು ನ್ಯಾಯಾಂಗ ಹೋರಾಟ ನಡೆಸಿದ್ದಕ್ಕೆ ಪರಿಹಾರವಾಗಿ ₹10 ಸಾವಿರ ಪಾವತಿಸಬೇಕು. ಮುಂದಿನ 60 ದಿನಗಳಲ್ಲಿ ಆದೇಶ ಪಾಲಿಸಲು ವಿಫಲವಾದಲ್ಲಿ ₹17,77,422 ಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದಿರುವ ಪೀಠ.
D K Shivakumar & D K Suresh
D K Shivakumar & D K Suresh

ಗ್ರಾಹಕರೊಬ್ಬರು ₹30 ಲಕ್ಷ ಮುಂಗಡ ಹಣ ಪಾವತಿಸಿ ಕಾಯ್ದಿರಿಸಿದ್ದ ಫ್ಲ್ಯಾಟ್‌ ಅನ್ನು ನಿಗದಿತ ಸಮಯದಲ್ಲಿ ಪೂರ್ಣ ಹಣ ಪಾವತಿ ಮಾಡಲಾಗದೆ ವಿಳಂಬ ಮಾಡಿದ್ದಾರೆ ಎನ್ನುವ ಕಾರಣ ನೀಡಿ ₹17 ಲಕ್ಷ ಕಡಿತ ಮಾಡಿ ಬಾಕಿ ಹಣ ಪಾವತಿಸಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ, ಸಹೋದರಿಗೆ ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಕಡಿತ ಮಾಡಿರುವ ಹಣ ಮರುಪಾವತಿಸಲು ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಎನ್‌ಟಿವೈ ಬಡಾವಣೆಯ ಜೆ ರಾಘವೇಂದ್ರ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ ಶೋಭಾ, ಸದಸ್ಯರಾದ ಸುಮಾ ಮತ್ತು ಅನಿಲ್ ಕುಮಾರ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಮಾಡಿದೆ.

ಅಲ್ಲದೇ, ದೂರುದಾರರು ನ್ಯಾಯಾಂಗ ಹೋರಾಟ ನಡೆಸಿದ್ದಕ್ಕೆ ಪರಿಹಾರವಾಗಿ ₹10 ಸಾವಿರ ಪಾವತಿ ಮಾಡಬೇಕು. ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ₹17,77,422 ಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆದೇಶದಲ್ಲಿ ಏನಿದೆ: 2017ರಲ್ಲಿ ದೂರುದಾರರು ₹86,06,800ಕ್ಕೆ ಫ್ಲ್ಯಾಟ್‌ ಖರೀದಿ ಮಾಡಲು  ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ₹30,81,352 ಪಾವತಿಸಿದ್ದರು. ಕೊರೊನಾ ಕಾರಣದಿಂದ ಇನ್ನುಳಿದ ₹55,25,448 ಪಾವತಿ ಮಾಡಿರಲಿಲ್ಲ. ಪ್ರತಿವಾದಿಗಳಾದ ಶಿವಕುಮಾರ್ ಕುಟುಂಬ ಮತ್ತು  ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ 2017ರಲ್ಲಿ ಫ್ಲ್ಯಾಟ್‌ ಹಸ್ತಾಂತರಿಸುವುದಾಗಿ ತಿಳಿಸಿದ್ದರು. ಆದರೆ, ದೂರುದಾರರಿಗೆ ಮಂಜೂರಾಗಿದ್ದ ಫ್ಲ್ಯಾಟ್‌ ಅನ್ನು 2021ರಲ್ಲಿ ಮತ್ತೊಬ್ಬ ವ್ಯಕ್ತಿಗೆ ₹1,04,70,000ಕ್ಕೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ಆದರೆ, ದೂರುದಾರರು 2017ರಲ್ಲಿ ಒಪ್ಪಂದ ಮಾಡಿಕೊಂಡು ಅದೇ ವರ್ಷ ಹಣ ಪಾವತಿ ಮಾಡದೆ ದೂರು ಉಳಿಸಿದಿರುವುದರಿಂದ ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳಿಗೆ (ಡಿಕೆಶಿ ಕುಟುಂಬ) ನಷ್ಟವುಂಟಾಗಿಲ್ಲ. ಆದರೆ, ₹17,77,422 ಕಡಿತಗೊಳಿಸಿರುವುದು ಅಕ್ರಮ. ಆದ್ದರಿಂದ, ಆ ಹಣವನ್ನು 10.04.2017ರಿಂದ (ಒಪ್ಪಂದವಾದ ದಿನ) ಶೇ.10ರಷ್ಟು ಬಡ್ಡಿಯೊಂದಿಗೆ ದೂರುದಾರರಾದ ರಾಘವೇಂದ್ರ ಅವರಿಗೆ ಹಿಂದಿರುಗಿಸಬೇಕು ಎಂದು ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಡಿ ಕೆ ಶಿವಕುಮಾರ್, ಡಿ ಕೆ ಮಂಜುಳಾ, ಡಿ ಕೆ ಸುರೇಶ್ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ಡಿವಿನಿಟಿ ಪ್ರಾಜೆಕ್ಟ್‌ನ ಫ್ಲ್ಯಾಟ್‌ ಒಂದನ್ನು ₹86,06,800ಕ್ಕೆ 2017ರ ಏಪ್ರಿಲ್ 10 ರಂದು ರಾಘವೇಂದ್ರ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ, ಮುಂಗಡವಾಗಿ ₹30,81,352 ಅನ್ನು ಪಾವತಿಸಿದ್ದರು, ಆದರೆ, ಕೊರೊನಾ ಕಾರಣದಿಂದ ₹55,25,448 ಅನ್ನು ನಿಗದಿತ ಸಮಯಕ್ಕೆ ಪಾವತಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಆದರೆ, ಪ್ರತಿವಾದಿಗಳು ದೂರುದಾರರಿಗೆ ಯಾವುದೇ ಮಾಹಿತಿ ನೀಡದೆ ಒಪ್ಪಂದ ರದ್ದು ಮಾಡಿದ್ದರು. ಜೊತೆಗೆ ಇದೇ ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು. ಇದಾದ ಬಳಿಕ ₹17,77,422 ಅನ್ನು ಕಡಿತಗೊಳಿಸಿ ಇನ್ನುಳಿದ ₹13,03,930 ಅನ್ನು ಚೆಕ್ ಮೂಲಕ ಹಿಂದಿರುಗಿಸಿದ್ದರು. ಆದರೆ, ಹಣವನ್ನು ಕಡಿತಗೊಳಿಸಿರುವುದಕ್ಕೆ ಯಾವುದೇ ರೀತಿಯ ಕಾರಣ ನೀಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ದೂರುದಾರ ರಾಘವೇಂದ್ರ ಅವರು ಪ್ರತಿವಾದಿಗಳು ಅದೇ ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ. ಆದರೂ, ನಮ್ಮಿಂದ ₹17,77,422 ಅನ್ನು ಕಡಿತಗೊಳಿಸಿದ್ದಾರೆ ಎಂದು ಆಕ್ಷೇಪಿಸಿದ್ದರು.

ದೂರಿಗೆ ಆಕ್ಷೇಪಣೆ ಸಲ್ಲಿಸಿದ್ದ ಪ್ರತಿವಾದಿಗಳು, ಫ್ಲ್ಯಾಟ್‌ ಅನ್ನು 2017ರಲ್ಲಿ ದೂರುದಾರರಿಗೆ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿ ಮಾಡಿತ್ತು. ಹೀಗಾಗಿ, ಫ್ಲ್ಯಾಟ್‌ನ ವೆಚ್ಚ ಪರಿಷ್ಕರಣೆಯಾಗಿದ್ದು, ಅದರ ಮೊತ್ತ ₹1.4 ಕೋಟಿಗಳಿಗೆ ಹೆಚ್ಚಳವಾಗಿದೆ.

ಜೊತೆಗೆ ದೂರುದಾರರು ಒಪ್ಪಂದಂತೆ ಬಾಕಿ ಮೊತ್ತ ₹55 ಲಕ್ಷಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಒಪ್ಪಂದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹಲವು ಬಾರಿ ಇ-ಮೇಲ್ ಮತ್ತು ಕರೆ ಮಾಡಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಿದರೂ ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಅಂತಿಮವಾಗಿ 2019ರಲ್ಲಿ ಮತ್ತೊಂದು ಬಾರಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಬಳಿಕ ಒಪ್ಪಂದ ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದರು. ದೂರುದಾರರು ಪಾವತಿ ಮಾಡಿದ್ದ ಮೊತ್ತದಲ್ಲಿ ರದ್ದತಿ ಶುಲ್ಕ (ಕ್ಯಾನ್ಸಲೇಷನ್) ಹಾಗೂ ತೆರಿಗೆಯನ್ನು ಸೇರಿ ₹17,98,077 ಅನ್ನು ಕಡಿತಗೊಳಿಸಿ, ಬಾಕಿ ₹13,03,930 ಅನ್ನು ಚೆಕ್‌ ಮೂಲಕ ಹಿಂದಿರುಗಿಸಲಾಗಿದೆ. ಒಪ್ಪಂದದ ಬಳಿಕವೂ ದೂರುದಾರರು ಎರಡು ವರ್ಷಗಳ ಕಾಲ ಬಾಕಿ ಪಾವತಿ ಮಾಡಿಲ್ಲ. ಆದ್ದರಿಂದ, ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ, ದೂರು ರದ್ದುಗೊಳಿಸಬೇಕು ಎಂದು ಕೋರಿದ್ದರು. ಇದನ್ನು ಆಯೋಗ ಪುರಸ್ಕರಿಸಿಲ್ಲ.

Attachment
PDF
Raghavendra Vs D K Shivakumar.pdf
Preview

Related Stories

No stories found.
Kannada Bar & Bench
kannada.barandbench.com