

ಮುಂಬೈನ ಸಿಟಿ ಸಿವಿಲ್ ನ್ಯಾಯಾಲಯವು ಶುಕ್ರವಾರ ಚಲನಚಿತ್ರ ನಿರ್ದೇಶಕ ಅಭಿನವ್ ಕಶ್ಯಪ್ ಮತ್ತು ಬಾಲಿವುಡ್ ಠಿಕಾನಾ ಚಾನೆಲ್‌ನ ಯೂಟ್ಯೂಬ್ ನಿರೂಪಕರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡುವುದನ್ನು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ [ಸಲ್ಮಾನ್ ಖಾನ್ ವಿರುದ್ಧ ಅಭಿನವ್ ಕಶ್ಯಪ್ & ಅದರ್ಸ್]̤.
ಅಭಿನವ್ ಕಶ್ಯಪ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ಸರಣಿ ಸಂದರ್ಶನಗಳು ಮತ್ತು ಪಾಡ್‌ಕಾಸ್ಟ್‌ಗಳ ಮೂಲಕ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದು, ಅವುಗಳನ್ನು ನಿರ್ಬಂಧಿಸಲು ಕೋರಿ ಸಲ್ಮಾನ್ ಖಾನ್ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣವನ್ನು ಆಲಿಸಿದ ಮುಂಬೈನ ನ್ಯಾಯಾಲಯವು ಸಲ್ಮಾನ್ ಕೋರಿಕೆಯನ್ನು ಮನ್ನಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಕೋಮಲ್ ಮೆಹ್ರು ಒಡೆತನದ ಮತ್ತು ಖುಷ್ಬೂ ಹಜಾರೆ ನಿರೂಪಕಿಯಾಗಿರುವ ಯೂಟ್ಯೂಬ್ ವಾಹಿನಿ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಭಿನವ್ ಕಶ್ಯಪ್ ಸಲ್ಮಾನ್ ವಿರುದ್ಧ ಆಪಾದನೆಗಳನ್ನು ಮಾಡಿರುವ ಸಂದರ್ಶನಗಳು ಪ್ರಸಾರವಾಗಿದ್ದವು. ಈ ಸಂದರ್ಶನಗಳಲ್ಲಿ ಅಭಿನವ್ ಕಶ್ಯಪ್ ನೀಡಿರುವ ಹೇಳಿಕೆಗಳು "ಮಾನಹಾನಿಕರವೂ, ಅವಹೇಳನಕಾರಿಯೂ, ನಿಂದನೀಯವೂ ಮತ್ತು ವಾದಿಯ ಪ್ರತಿಷ್ಠೆಗೆ ಧಕ್ಕೆತರುವಂತಹವೂ ಆಗಿವೆ" ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಜಿ ಭೋಸಲೆ ಅವರು ಅಭಿಪ್ರಾಯಪಟ್ಟರು.
ಈ ಬಗೆಯ ಹೇಳಿಕೆಗಳು ಸಾರ್ವಜನಿಕರ ದೃಷ್ಟಿಯಲ್ಲಿ ಸಲ್ಮಾನ್ ಖಾನ್ ಅವರ ಪ್ರತಿಷ್ಠೆಯನ್ನು ಕುಗ್ಗಿಸುತ್ತವೆ ಎಂದು ನ್ಯಾಯಾಲಯವು ಹೇಳಿತು. ಈ ಹಿನ್ನೆಲೆಯಲ್ಲಿ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಕಶ್ಯಪ್ ಅವರು ಕೋರಿದ್ದ ರಕ್ಷಣೆಯ ಹಕ್ಕನ್ನು ಅದು ತಿರಸ್ಕರಿಸಿತು.
"ಪ್ರತಿಯೊಬ್ಬ ವ್ಯಕ್ತಿಯೂ ರಕ್ಷಿಸಿಕೊಳ್ಳಬೇಕಾದ ಗೌಪ್ಯತೆ ಮತ್ತು ಪ್ರತಿಷ್ಠೆಯನ್ನು ಹೊಂದಿರುತ್ತಾರೆ. ಅಭಿನವ್ ಕಶ್ಯಪ್ ಅವರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಎಂಬ ವಾದವನ್ನು ಈ ವಿಚಾರದಲ್ಲಿ ಒಪ್ಪಲಾಗದು" ಎಂದು ನ್ಯಾಯಾಲಯ ಹೇಳಿತು.
ಮುಂದುವರೆದು, ಖಾನ್ ಅಥವಾ ಅವರ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ವಿಷಯವನ್ನು ಅಪ್‌ಲೋಡ್ ಮಾಡುವುದರಿಂದ ಅಥವಾ ಪ್ರಸರಣ ಮಾಡುವುದರಿಂದ ಅಭಿನವ್ ಕಶ್ಯಪ್ ಮತ್ತು ನಿರೂಪಕರನ್ನು ನ್ಯಾಯಾಲಯವು ನಿರ್ಬಂಧಿಸಿತು.
ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಕುರಿತು, ನ್ಯಾಯಾಲಯವು "ಯಾರ ಕುಟುಂಬದ ವಿರುದ್ಧವೂ ಯಾರೂ ಮಾನಹಾನಿಕರ ಹೇಳಿಕೆಗಳನ್ನು ನೀಡುವಂತಿಲ್ಲ ಮತ್ತು ನೀಡಬಾರದು" ಎಂದು ಹೇಳಿದೆ.