ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೇ ಎಂಬುದಕ್ಕೆ ಸಂಬಂಧಿಸಿದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ [ಸುಪ್ರಿಯೊ ಮತ್ತು ಇತರರು ವರ್ಸಸ್ ಭಾರತ ಸರ್ಕಾರ].
ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತ್ತು. ಹತ್ತು ದಿನಗಳ ಕಾಲ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಮೇ 11ರಂದು ತೀರ್ಪು ಕಾಯ್ದಿರಿಸಿತ್ತು. ನಾಳೆ ತೀರ್ಪು ಪ್ರಕಟವಾಗಲಿದೆ.
ಸಲಿಂಗ ಕೂಟಕ್ಕೆ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ. ಆದರೆ, ಸಲಿಂಗ ಜೋಡಿಗೆ ವಿವಾಹದ ಹಣಪಟ್ಟಿ ಇಲ್ಲದೆಯೂ ಸಾಮಾಜಿಕ ಮತ್ತು ಇತರೆ ಸೌಲಭ್ಯ ಕಲ್ಪಿಸುವುದನ್ನು ಖಾತರಿಪಡಿಸಬೇಕು ಎಂದು ವಿಚಾರಣೆ ವೇಳೆ ಪೀಠ ಹೇಳಿತ್ತು.
ವಿವಾಹಗಳು ಕೇವಲ ಶಾಸನಬದ್ಧ ರಕ್ಷಣೆ ಮಾತ್ರವೇ ಅಲ್ಲದೆ ಸಾಂವಿಧಾನಿಕ ರಕ್ಷಣೆ ಪಡೆಯಲೂ ಅರ್ಹವಾಗಿರುತ್ತವೆ ಎಂದು ಇದೇ ವೇಳೆ ನ್ಯಾಯಾಲಯ ಅವಲೋಕನ ಮಾಡಿತ್ತು.