[ವಾಂಖೆಡೆ ಪ್ರಕರಣ] ಪ್ರಭಾವಿ ವ್ಯಕ್ತಿ ಎಂದ ಮಾತ್ರಕ್ಕೆ ಪ್ರಕರಣದ ತುರ್ತು ವಿಚಾರಣೆ ಮಾಡಲಾಗದು: ಬಾಂಬೆ ಹೈಕೋರ್ಟ್‌

ವಾಂಖೆಡೆ 17 ವರ್ಷದ ಅಪ್ರಾಪ್ತರಿರುವಾಗಲೇ ನಕಲಿ ವಯೋಮಾನ ಪ್ರಮಾಣಪತ್ರ ನೀಡುವ ಮೂಲಕ ಅಕ್ರಮವಾಗಿ ಬಾರ್‌ ಮತ್ತು ರೆಸ್ಟೊರೆಂಟ್‌ ನಡೆಸಲು ಪರವಾನಗಿ ಪಡೆದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ಒಡೆತನದ ಬಾರ್‌ನ ಪರವಾನಗಿ ರದ್ದುಗೊಂಡಿದೆ.
Justice Gautam Patel, Bombay High Court

Justice Gautam Patel, Bombay High Court

Published on

ವಿವಾದಿತ ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ ತಮ್ಮ ಬಾರ್‌ ಮತ್ತು ರೆಸ್ಟೊರೆಂಟ್‌ ಪರವಾನಗಿ ರದ್ದನ್ನು ಪ್ರಶ್ನಿಸಿ ಸಲ್ಲಸಿರುವ ಅರ್ಜಿ ವಿಚಾರಣೆಯನ್ನು ತುರ್ತಾಗಿ ಆಲಿಸಲು ಬಾಂಬೆ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ನ್ಯಾ. ಗೌತಮ್‌ ಪಟೆಲ್‌ ಅವರ ಮುಂದೆ ಪ್ರಕರಣವನ್ನು ಉಲ್ಲೇಖಿಸಿದಾಗ ಅವರು, "ಈ ವಿಷಯವನ್ನು ನಮ್ಮ ಮುಂದೆ ನಿನ್ನೆ ಪ್ರಸ್ತಾಪಿಸಿರಲಿಲ್ಲ. ನಮ್ಮ ಮುಂದೆ ಉಲ್ಲೇಖಿಸಿರದ ಪ್ರಕರಣಗಳನ್ನು ನಾವು ತೆಗೆದುಕೊಳ್ಳಲಾಗುವುದಿಲ್ಲ. ಈ ವ್ಯವಸ್ಥೆಯು ಕೇವಲ ಕೆಲವರಿಗಾಗಿಯೇ ನಡೆಯುತ್ತಿದೆಯೇನು?" ಎಂದು ಪ್ರಶ್ನಿಸಿದರು.

ಮುಂದುವರೆದು ನ್ಯಾಯಮೂರ್ತಿಗಳು, ಪ್ರಕರಣವು ಮಾಧ್ಯಮಗಳಲ್ಲಿ ದೊಡ್ಡದಾಗಿ ಪ್ರಚಾರ ಪಡೆದಿದೆ ಎಂದ ಮಾತ್ರಕ್ಕೆ ಹಾಗೂ ಅದರಲ್ಲಿ ಭಾಗಿಯಾಗಿರುವವರು ಪ್ರಭಾವಿಗಳು ಎಂದಾಕ್ಷಣ ನಾವು ಪ್ರಕರಣವನ್ನು ಆಲಿಸಲು ತ್ವರಿತವಾಗಿ ಪಟ್ಟಿಮಾಡಲೇಬೇಕು ಎನ್ನುವ ಕಟ್ಟಳೆಯೇನೂ ಇಲ್ಲ ಎಂದರು.

ಅಧಿಕಾರಿ ಸಮೀರ್ ವಾಂಖೆಡೆ ಹಾಗೂ ಮಹಾರಾಷ್ಟ್ರ ಸರ್ಕಾರದ ಸಂಪುಟ ಸಚಿವ ನವಾಬ್‌ ಮಲಿಕ್‌ ವಿರುದ್ಧದ ಆರೋಪ ಪ್ರತ್ಯಾರೋಪಗಳು ಮತ್ತೊಂದು ಮಜಲಿಗೆ ತಲುಪಿವೆ. ಮಲಿಕ್‌ ಅವರು ಅಬಕಾರಿ ಇಲಾಖೆಗೆ ಬರೆದಿದ್ದ ಪತ್ರದ ಆಧಾರದಲ್ಲಿ ಥಾಣೆಯ ಹೊರವಲಯದಲ್ಲಿ ಇರುವ ವಾಂಖೆಡೆಯ ಬಾರ್‌ ಮತ್ತು ರೆಸ್ಟೊರೆಂಟ್‌ ಅನ್ನು ತನಿಖೆಗೊಳಪಡಿಸಿದ್ದ ಅಧಿಕಾರಿಗಳ ಅದರ ಪರವಾನಗಿಯನ್ನು ರದ್ದುಪಡಿಸಿದ್ದರು.

ವಾಂಖೆಡೆ ಅವರು ಹದಿನೇಳು ವರ್ಷದ ಅಪ್ರಾಪ್ತರಿರುವಾಗಲೇ ನಕಲಿ ವಯೋಮಾನ ಪ್ರಮಾಣಪತ್ರವನ್ನು ನೀಡುವ ಮೂಲಕ ಅಕ್ರಮವಾಗಿ ಬಾರ್‌ ಮತ್ತು ರೆಸ್ಟೊರೆಂಟ್‌ ನಡೆಸಲು ಪರವಾನಗಿ ಪಡೆದಿದ್ದಾರೆ ಎನ್ನುವ ಆರೋಪವನ್ನು ಮಾಡಲಾಗಿತ್ತು. ತನಿಖೆ ವೇಳೆ ಇದು ಸತ್ಯವೆಂದು ಕಂಡುಬಂದಿತ್ತು. ಪರವಾನಗಿ ರದ್ದು ಪಡಿಸಿದ ನಂತರ ಅಧಿಕಾರಿಗಳು ವಾಂಖೆಡೆಯ ವಿರುದ್ಧ ಥಾಣೆಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದರು. ಪ್ರಕರಣವನ್ನು ತೆರವುಗೊಳಿಸಲು ಕೋರಿ ವಾಂಖೆಡೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com