ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಖುದ್ದು ಹಾಜರು, ಜಾಮೀನು ಮಂಜೂರು ಮಾಡಿದ ಮ್ಯಾಜಿಸ್ಟ್ರೇಟ್‌

ಉದಯನಿಧಿ ಅವರ ಹಾಜರಾತಿ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟ್‌, ₹ 5 ಸಾವಿರ ನಗದು ಹಾಗೂ ₹ 50 ಸಾವಿರ ಮೊತ್ತದ ಆರೋಪಿಯ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.
Udhayanidhi Stalin
Udhayanidhi StalinX
Published on

'ಸನಾತನ ಧರ್ಮವನ್ನು ಡೆಂಘಿ, ಮಲೇರಿಯಾ ಹಾಗೂ ಕೊರೊನಾಕ್ಕೆ ಹೋಲಿಕೆ ಮಾಡಿ ಸಂಪೂರ್ಣ ನಿರ್ಮೂಲನೆ ಮಾಡಬೇಕು' ಎಂದು ಹೇಳಿಕೆ ನೀಡುವ ಮೂಲಕ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಜೂನ್‌ 3ರ ಆದೇಶದಂತೆ ಖುದ್ದು ಉದಯನಿಧಿ ಅವರು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರಾದರು.

ಉದಯನಿಧಿ ಅವರ ಹಾಜರಾತಿ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟ್‌, ₹ 5 ಸಾವಿರ ನಗದು ಹಾಗೂ ₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.

ಉದಯನಿಧಿ ಪರ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ಪಿ ವಿಲ್ಸನ್ ಹಾಗೂ ದೂರುದಾರರ ಪರ ವಕೀಲ ಧರ್ಮಪಾಲ್ ಹಾಜರಿದ್ದರು.

ಇದೇ ಪ್ರಕರಣದಲ್ಲಿ ಕಾರ್ಯಕ್ರಮದ ಸಂಘಟಕರಾದ ಎಸ್‌ ವೆಂಕಟೇಶ್‌, ಎಂ ರಾಮಲಿಂಗಂ ಮತ್ತು ಅದವನ್‌ ದಿಚನ್ಯ ವಿರುದ್ಧದ ನ್ಯಾಯಿಕ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ: ಚೆನ್ನೈನ ತೇನಂಪೇಟೆಯಲ್ಲಿ 2023ರ ಸೆಪ್ಟೆಂಬರ್‌ 4ರಂದು ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಸನಾತನ ಧರ್ಮವನ್ನು ಡೆಂಘಿ, ಮಲೇರಿಯಾ ಹಾಗೂ ಕೊರೊನಾಕ್ಕೆ ಹೋಲಿಕೆ ಮಾಡಿ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು. ಈ ಸುದ್ದಿಯನ್ನು ವಿಜಯ ತರಂಗ ಕನ್ನಡ ಪತ್ರಿಕೆ ಪ್ರಕಟಿಸಿತ್ತು. ಇದನ್ನು ಆಧರಿಸಿ ಬೆಂಗಳೂರಿನ ಪರಮೇಶ ಅವರು ಖಾಸಗಿ ದೂರು ದಾಖಲಿಸಿದ್ದರು. ದೂರುದಾರರ ಪರವಾಗಿ ವಕೀಲ ಧರ್ಮಪಾಲ ವಾದ ಮಂಡಿಸಿದ್ದರು. ಇದರ ಸಂಜ್ಞೇ ಪರಿಗಣಿಸಿದ್ದ ನ್ಯಾಯಾಲಯವು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153, 298 ಮತ್ತು 500 ಅಡಿ ಪ್ರಕರಣ ದಾಖಲಿಸಲು ಆದೇಶಿಸಿದೆ.

Kannada Bar & Bench
kannada.barandbench.com