ಸನಾತನ ಸಂಸ್ಥೆ ಭಯೋತ್ಪಾದಕ ಸಂಘಟನೆಯಲ್ಲ, ಆಧ್ಯಾತ್ಮಿಕ ಸಂಸ್ಥೆ: ಬಾಂಬೆ ಹೈಕೋರ್ಟ್

ಸಂಘಟನೆಯ ಸದಸ್ಯನಾಗಿರುವ ಆರೋಪಿ ತನ್ನ ಮನೆಯಲ್ಲಿ ಕಚ್ಚಾ ಬಾಂಬ್ ಸಿದ್ಧಪಡಿಸಿದ್ದ ಹಿನ್ನೆಲೆಯಲ್ಲಿ 2018ರಲ್ಲಿ ಆತನನ್ನು ಬಂಧಿಸಲಾಗಿತ್ತು.
Bombay High Court
Bombay High Court

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಹಿಂದೂ ಸಂಘಟನೆಯಾದ ಸನಾತನ ಸಂಸ್ಥೆ ಭಯೋತ್ಪಾದಕ ಸಂಘಟನೆಯಲ್ಲಿ ಬದಲಿಗೆ ಧಾರ್ಮಿಕ ಶಿಕ್ಷಣ ನೀಡುವ ಆಧ್ಯಾತ್ಮಿಕ ಸಂಸ್ಥೆ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಲೀಲಾಧರ್‌ ಅಲಿಯಾಸ್‌ ವಿಜಯ್‌ ಲೋಧಿ ಮತ್ತು ಸರ್ಕಾರದ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸದಸ್ಯನಾಗಿರುವ ಆರೋಪಿ ವಿಜಯ್‌ ಲೋಧಿಗೆ ಜಾಮೀನು ನೀಡಿದ ನ್ಯಾಯಮೂರ್ತಿಗಳಾದ ಸುನಿಲ್‌ ಶುಕ್ರೆ ಮತ್ತು ಕಮಲ್‌ ಖಾತಾ ಅವರಿದ್ದ ವಿಭಾಗೀಯ ಪೀಠ ಆತನ ಜಾಮೀನು ಅರ್ಜಿ ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು.

ಈ ಸಂದರ್ಭದಲ್ಲಿ ಹೈಕೋರ್ಟ್‌ “ಕೇಂದ್ರ ಸರ್ಕಾರ ಯುಎಪಿಎ ಅಡಿ ನಿಷೇಧ ವಿಧಿಸದೇ ಇರುವ ಸಂಘಟನೆಯಲ್ಲಿ ಲೋಧಿ ಕೆಲಸ ಮಾಡುತ್ತಿದ್ದಾರೆ ಎಂದು ವಿಶೇಷ ನ್ಯಾಯಾಲಯ ಆರೋಪಿಸಿರುವುದು ಆದೇಶದ ಜಿಜ್ಞಾಸೆಗೀಡುಮಾಡುವಂತಹ ಭಾಗ” ಎಂದು ಬಣ್ಣಿಸಿದೆ.

Also Read
ಕಾನೂನುಬಾಹಿರ ಸಂಸ್ಥೆಯ ಸದಸ್ಯತ್ವ ಹೊಂದಿದ್ದರೂ ಯುಎಪಿಎ ಅಡಿ ಅಪರಾಧ: ಸೆಕ್ಷನ್‌ 10(ಎ)(ಐ) ಎತ್ತಿಹಿಡಿದ ಸುಪ್ರೀಂ

“ಪ್ರಕರಣದ ಅತ್ಯಂತ ಜಿಜ್ಞಾಸೆಗೀಡುಮಾಡುವಂತಹ ಭಾಗವೆಂದರೆ ಯುಎಪಿಎ ಕಾಯಿದೆ- 2004ರ ಅರ್ಥ ಮತ್ತು ಚಿಂತನೆಯಡಿ ʼಸನಾತನ ಸಂಸ್ಥೆʼ ಎಂಬುದು ನಿಷೇಧಿತ ಅಥವಾ ಭಯೋತ್ಪಾದಕ ಸಂಘಟನೆ ಇಲ್ಲವೇ ಉಗ್ರಗಾಮಿ ಗುಂಪಿನ ಮುಂಚೂಣಿ ಸಂಘಟನೆ ಎಂದು ಘೋಷಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ. ನೋಂದಾಯಿತ ಧರ್ಮದತ್ತಿ ಟ್ರಸ್ಟ್ ಆಗಿರುವ ಸಂಸ್ಥೆ,  ಆಧ್ಯಾತ್ಮಿಕ ಜ್ಞಾನ ನೀಡಲು ಮತ್ತು ಜನಸಾಮಾನ್ಯರಲ್ಲಿ ಧಾರ್ಮಿಕ ನಡೆ ಬೆಳೆಸುವ ಗುರಿ  ಹೊಂದಿದೆ ಎಂದು ಅದು ನುಡಿದಿದೆ.

ತನ್ನ ಮನೆಯಲ್ಲಿ ಸಂಘಟನೆಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿ ಅಥವಾ ತಯಾರಿಸಿಟ್ಟುಕೊಂಡ ಆರೋಪದಡಿ ಲೋಧಿಯನ್ನು 2018ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿತ್ತು. ಆರೋಪಿ ‘ಹಿಂದೂ ರಾಷ್ಟ್ರʼನಿರ್ಮಿಸುವ ಉದ್ದೇಶ ಹೊಂದಿದ್ದ ಸಂಘಟನೆಯ ಸದಸ್ಯನಾಗಿದ್ದು ಸಂಚಿನ ಮೂಲಕ ಅದನ್ನು ಸಾಧಿಸಲು ಹೊರಟಿದ್ದ ಎಂದು ಎಟಿಎಸ್‌ ಆರೋಪಿಸಿತ್ತು.

ಅಲ್ಲದೆ ಸ್ಫೋಟಕ ನಿರ್ವಹಣೆ ತರಬೇತಿ ಶಿಬಿರಗಳನ್ನು ಆಯೋಜಿಸುವುದು, ದೇಶವನ್ನು ಅಸ್ಥಿರಗೊಳಿಸಿ ಸಾರ್ವಭೌಮತ್ವವನ್ನು ನಾಶಪಡಿಸುವುದು, ಚಲನಚಿತ್ರಗಳ ಪ್ರದರ್ಶನ ಮತ್ತು ಪಾಶ್ಚಾತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಂತೆ ತಡೆಯುವುದು ಆ ಸಂಚಿನ ಭಾಗವಾಗಿದ್ದವು ಎಂದು ಎಟಿಎಸ್‌ ದೂರಿತ್ತು.

ಲೋಧಿಯೇ ಮೂರು ಕಚ್ಚಾ ಬಾಂಬ್‌ಗಳನ್ನು ತಯಾರಿಸಿದ್ದ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. “ಪೊಲೀಸರು ಶೋಧಿಸಿದ ಮನೆ ಮೇಲ್ಮನವಿದಾರನ ಒಡೆತನದಲ್ಲಿಲ್ಲ. ಇದು ಆತನ ಪೂರ್ವಜರ ಮನೆ ಎಂದು ಹೇಳಲಾಗಿದೆ. ಮನೆ ಶೋಧದ ಸಮಯದಲ್ಲಿ ಪತ್ತೆಯಾದ ಆಸ್ತಿಯ ಮಾಲೀಕತ್ವದ ಸಾಧ್ಯತೆಯನ್ನು ಇತರರು ತಳ್ಳಿಹಾಕದ ವಿನಾ ಬಾಂಬ್‌ ಸಂಗ್ರಹಿಸಲು ಆರೋಪಿ ಕಾರಣನೆಂದು ಹೇಳಲಾಗದು. ಆರೋಪಿಗಳು ಭೇಟಿ ನೀಡಿದ ತರಬೇತಿ ಶಿಬಿರಗಳ ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ಯಾವುದೇ ಭೌತಿಕ ಪುರಾವೆಗಳು ಕಂಡುಬಂದಿಲ್ಲ” ಎಂದು ನ್ಯಾಯಾಲಯ ಹೇಳಿತು.

ವಿಚಾರಣಾ ನ್ಯಾಯಾಲಯದ ಆದೇಶ ತಪ್ಪು ಎಂದು ತೀರ್ಮಾನಿಸಿದ ಹೈಕೋರ್ಟ್, ಅದನ್ನು ರದ್ದುಗೊಳಿಸಿ, ಲೋಧಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿತು.  

Related Stories

No stories found.
Kannada Bar & Bench
kannada.barandbench.com