ಸಂಪೂರ್ಣ ಅಪರಾಧ ಭಾರತದ ಹೊರಗೆ ನಡೆದಿದ್ದಾಗ ಮಾತ್ರ ಸಿಆರ್‌ಪಿಸಿ ಸೆಕ್ಷನ್ 188ರ ಅಡಿ ಕೇಂದ್ರದ ಅನುಮತಿ ಅಗತ್ಯ: ಸುಪ್ರೀಂ

ಸಂಪೂರ್ಣ ಕೃತ್ಯವನ್ನು ದೇಶದ ಹೊರಗೆ ಎಸಗದೆ ಇದ್ದರೆ ಪ್ರಕರಣ ಸಿಆರ್ಪಿಸಿ ಸೆಕ್ಷನ್ 188 ರ ವ್ಯಾಪ್ತಿಗೆ ಬರುವುದಿಲ್ಲ. ಆಗ ಯಾವುದೇ ಅನುಮತಿ ಅಗತ್ಯ ಇರುವುದಿಲ್ಲ ಎಂದು ಪೀಠ ತೀರ್ಪು ನೀಡಿದೆ.
ಸಂಪೂರ್ಣ ಅಪರಾಧ ಭಾರತದ ಹೊರಗೆ ನಡೆದಿದ್ದಾಗ ಮಾತ್ರ ಸಿಆರ್‌ಪಿಸಿ ಸೆಕ್ಷನ್ 188ರ ಅಡಿ ಕೇಂದ್ರದ ಅನುಮತಿ ಅಗತ್ಯ: ಸುಪ್ರೀಂ
ramesh sogemane
Published on

ಸಂಪೂರ್ಣ ಅಪರಾಧ ಭಾರತದ ಹೊರಗೆ ನಡೆದಿದ್ದಾಗ ಮಾತ್ರ ಸಿಆರ್‌ಪಿಸಿ ಸೆಕ್ಷನ್‌ 188ರ ಅಡಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಸರ್ತಾಜ್ ಖಾನ್ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].

ಸಂಪೂರ್ಣ ಕೃತ್ಯವನ್ನು ದೇಶದ ಹೊರಗೆ ಎಸಗದೆ ಇದ್ದರೆ ಪ್ರಕರಣ ಸಿಆರ್‌ಪಿಸಿ ಸೆಕ್ಷನ್‌ 188ರ ವ್ಯಾಪ್ತಿಗೆ ಬರುವುದಿಲ್ಲ. ಆಗ ಸೆಕ್ಷನ್‌ 188ರಲ್ಲಿ ಕಡ್ಡಾಯಗೊಳಿಸಿರುವಂತೆ ಯಾವುದೇ ಅನುಮತಿ ಅಗತ್ಯ ಇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್‌, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.

ಸಿಆರ್‌ಪಿಸಿ ಸೆಕ್ಷನ್‌ 188ರ ಪ್ರಕಾರ ಭಾರತೀಯ ಪ್ರಜೆಯೊಬ್ಬ ದೇಶದ ಹೊರಗೆ ಮಾಡಿದ ಅಪರಾಧದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಇದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ.

"ಸೆಕ್ಷನ್ 188 ರ ಪ್ರಕಾರ, ಭಾರತದ ಹೊರಗೆ ಅಪರಾಧವನ್ನು ಎಸಗಿದ್ದರೂ ಕೂಡ, (ಎ) ಯಾವುದೇ ದೇಶದ ವ್ಯಾಪ್ತಿಗೆ ಒಳಪಡದ ಮುಕ್ತ ಸಾಗರದಲ್ಲಿ ಅಥವಾ ಬೇರೆಲ್ಲಿಯಾದರೂ (ಭಾರತೀಯ) ಪ್ರಜೆ ಅಪರಾಧ ಎಸಗಿದ್ದರೆ ಇಲ್ಲವೇ (ಬಿ ಈ ದೇಶದ ಪ್ರಜೆಯಲ್ಲದವರು ಭಾರತದಲ್ಲಿ ನೋಂದಾಯಿಸಲಾದ ಹಡಗು ಅಥವಾ ವಿಮಾನದಲ್ಲಿ ಅಪರಾಧ ಎಸಗಿದ್ದರೂ ಈ ವಿಭಾಗದಲ್ಲಿ ಉಲ್ಲೇಖಿಸಲಾದ ಷರತ್ತುಗಳಿಗೊಳಪಟ್ಟರೆ ಭಾರತದಲ್ಲಿ ಅಪರಾಧದ ವಿಚಾರಣೆ ನಡೆಸಬಹುದು. ಇಡೀ ಅಪರಾಧ ದೇಶದ ಹೊರಗೆ ನಡೆದಿದ್ದಾಗ ಈ ಸೆಕ್ಷನ್‌ ಅನ್ವಯವಾಗಲಿದ್ದು ಆಗ (ಕೇಂದ್ರ ಸರ್ಕಾರದ) ಅನುಮತಿಯು ಅಂತಹ ಅಪರಾಧವನ್ನು ಭಾರತದಲ್ಲಿ ತನಿಖೆ ನಡೆಸಲು ಅಥವಾ ವಿಚಾರಣೆ ನಡೆಸಲು ಅನುವು ಮಾಡಿಕೊಡುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ.

Also Read
[ಆರ್ಯನ್ ಖಾನ್ ಮಾದಕವಸ್ತು ಪ್ರಕರಣ] ಇದೇ ಮೊದಲ ಬಾರಿಗೆ ವಿದೇಶಿ ಪ್ರಜೆಗೆ ಜಾಮೀನು ನೀಡಿದ ಮುಂಬೈ ನ್ಯಾಯಾಲಯ

ನೇಪಾಳದ ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ಶೋಷಣೆಯ ಉದ್ದೇಶಕ್ಕೆ ಆಮಿಷ ಒಡ್ಡಿ ಮಾನವ ಕಳ್ಳಸಾಗಣೆ ಮಾಡಿದ ಆರೋಪವನ್ನು ಮೇಲ್ಮನವಿದಾರನ ವಿರುದ್ಧ ಮಾಡಲಾಗಿತ್ತು. ಆದರೆ ವಿಚಾರಣಾ ನ್ಯಾಯಾಲಯ ಬಂಧಿತ ಮೇಲ್ಮನವಿದಾರನನ್ನು ಆರೋಪಗಳಿಂದ ಮುಕ್ತಗೊಳಿಸಿ ಖುಲಾಸೆ ಮಾಡಿತ್ತು. ಈ ಆದೇಶವನ್ನು ಬದಿಗೆ ಸರಿಸಿದ ಉತ್ತರಾಖಂಡ ಹೈಕೋರ್ಟ್‌ ಮೇಲೆ ಉಲ್ಲೇಖಿಸಿದ ನಿಯಮಗಳನುಸಾರ ಆರೋಪಿ ದೋಷಿಎಂದುತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ.

ಮೇಲ್ಮನವಿದಾರನ ವಾದ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ ಕೃತ್ಯ ಸಂಪೂರ್ಣವಾಗಿ ಭಾರತದ ಹೊರಗೆ ನಡೆಯದೇ ಇರುವುದರಿಂದ ಇದು ಸೆಕ್ಷನ್‌ 188 ವ್ಯಾಪ್ತಿಗೆ ಬರುವುದಿಲ್ಲ ಹೀಗಾಗಿ ಕೇಂದ್ರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿದೆ.

Kannada Bar & Bench
kannada.barandbench.com